Home ಟಾಪ್ ಸುದ್ದಿಗಳು ಮೈಸೂರಿನಲ್ಲಿ ಸಂಭ್ರಮದ ದಸರಾ: ಜಂಬೂ ಸವಾರಿ ವೈಭವ ಕಣ್ತುಂಬಿಕೊಂಡ ಜನತೆ

ಮೈಸೂರಿನಲ್ಲಿ ಸಂಭ್ರಮದ ದಸರಾ: ಜಂಬೂ ಸವಾರಿ ವೈಭವ ಕಣ್ತುಂಬಿಕೊಂಡ ಜನತೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಇಂದು ವೈಭವದಿಂದ ನಡೆಯಿತು.

ಚಾಮುಂಡೇಶ್ವರಿ ಉತ್ಸವ ಮೂರ್ತಿಯಿರುವ ಚಿನ್ನದಂಬಾರಿ ಹೊತ್ತು ಅಭಿಮನ್ಯು ಅರಮನೆ ಅಂಗಳದಲ್ಲಿ ಹೆಜ್ಜೆ ಹಾಕಿದ.
ಅಭಿಮನ್ಯು ಆನೆಗೆ ಕುಮ್ಕಿ ಆನೆಗಳಾಗಿ ಕಾವೇರಿ, ಚೈತ್ರ ಆನೆಗಳು ಸಾಥ್ ನೀಡಿದವು. ಮುಂದೆ ಸ್ತಬ್ಧಚಿತ್ರಗಳು ಸಾಗಿದವು.

ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬೊಮ್ಮಾಯಿ ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ದೇವಿಗೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಸಾಥ್ ನೀಡಿದರು.


ಜಂಬೂಸವಾರಿ ಮೆರವಣಿಗೆಯಲ್ಲಿ 6 ಸ್ತಬ್ಧಚಿತ್ರಗಳು ಪ್ರದರ್ಶನಗೊಂಡಿದ್ದು, ಪ್ರತಿ ಬಾರಿ 45ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಭಾಗಿಯಾಗುತ್ತಿದ್ದವು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಸರಳ ದಸರಾ, ಸ್ತಬ್ಧಚಿತ್ರಗಳಿಗೆ ಕೊಕ್ ಹಾಕಲಾಗಿದೆ.

ಯಶಸ್ವಿಯಾಗಿ ಮುಕ್ತಾಯಗೊಂಡ 4 ನೇ ಸರಳ ದಸರಾ ಮಹೋತ್ಸವ

 ನಾಲ್ಕುನೂರು ವರ್ಷಕ್ಕೂ ಹೆಚ್ಚು ಇತಿಹಾಸವಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಲವು ಕಾರಣಗಳಿಗೆ ಈ ವರ್ಷವೂ ಸೇರಿ ಈ ತನಕ 4 ಸಲ ಸರಳವಾಗಿ ಆಚರಣೆಗೊಂಡಿದೆ.

ಇದಕ್ಕೂ ಮೊದಲು 3 ಬಾರಿ ಸರಳ ದಸರಾ ಆಚರಿಸಲಾಗಿತ್ತು. ಮೊದಲಿಗೆ 1993 ರಲ್ಲಿ ಕಾವೇರಿ ನದಿ ನೀರು ಹಂಚಿಕೆ ಸಂಬಂಧದ ವಿವಾದದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಆದ್ದರಿಂದ ಆಗ ಸರಳ ದಸರಾ ಆಚರಣೆಗೆ ಸರಕಾರ ತೀರ್ಮಾನಿಸಿತ್ತು. ಆ ನಂತರ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, 2002 ರಲ್ಲಿ ವರನಟ ಡಾ.ರಾಜ್ ಕುಮಾರ್ ಅಪಹರಣ, ಬರಗಾಲದಿಂದ ದಸರಾ ಆಚರಣೆ ಸರಳವಾಗಿ ನಡೆಯಿತು.

ಆದಾದ ನಂತರ ಈಗ ಅಂದರೆ, 2020 ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಸಂಪ್ರದಾಯ ಬಿಡಬಾರದು ಎಂಬ ಸಲುವಾಗಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಅರಮನೆ ಆವರಣಕ್ಕೆ ಮಾತ್ರ ಜಂಬೂಸವಾರಿ ಸಿಮೀತವಾಗಿತ್ತು. ಕೇವಲ 23 ನಿಮಿಷಗಳಲ್ಲಿ ಜಂಬೂ ಸವಾರಿ (Jambu Savari) ಕೊನೆಗೊಂಡಿತ್ತು.

ಆದರೆ ಮಹಾಮಾರಿ ಕರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈ ವರ್ಷವೂ ಸಹ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗಿದೆ. ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆ ಅರಮನೆಗೆ ಮಾತ್ರ ಸಿಮೀತಗೊಳಿಸಲಾಗಿತ್ತು. ಜತೆಗೆ ಕೇವಲ 500 ಮಂದಿಗೆ ಮಾತ್ರ ಮೆರವಣಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು.

ಪರಿಣಾಮ ಈ ಬಾರಿ ದಸರಾ ಜಂಬೂ ಸವಾರಿ ಸಂಭ್ರಮವನ್ನು ಟಿವಿ, ವಾರ್ತಾ ಇಲಾಖೆಯ ಫೇಸ್ ಬುಕ್ ಪೇಜ್ ಹಾಗೂ ಆನ್ ಲೈನ್ ನ್ಯೂಸ್ ಪೋರ್ಟಲ್ ಗಳ ಮೂಲಕವೇ ಜನತೆ ಕಣ್ತುಂಬಿಕೊಳ್ಳಬೇಕಾಯಿತು.

Join Whatsapp
Exit mobile version