ಇಂಧೋರ್ : ನವರಾತ್ರಿ ಆಚರಣೆಯ ಅಂಗವಾಗಿ ಗರ್ಭಾ ನೃತ್ಯ ಕಾರ್ಯಕ್ರಮ ನಡೆಸುತ್ತಿದ್ದ ಸ್ಥಳಗಳಿಗೆ ನುಗ್ಗಿ ಮುಸ್ಲಿಮ್ ಯುವಕರನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗರ್ಭಾ ಕಾರ್ಯಕ್ರಮದ ಆಯೋಜಕರು ಪ್ರತಿಕ್ರಿಯಿಸಿದ್ದು, ಬಜರಂಗದಳದ ಸದಸ್ಯರು ಮುಸ್ಲಿಮರಿಗೆ ವಿನಾ ಕಾರಣ ಕಿರುಕುಳ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನವರಾತ್ರಿ ಹಬ್ಬದ ಪ್ರಯುಕ್ತ ಗರ್ಭಾ ನಡೆಸುತ್ತಿದ್ದ ಸ್ಥಳಗಳಿಗೆ ಪ್ರವೇಶಿಸಿದಕ್ಕಾಗಿ ಒಂದು ವಾರದ ಅವಧಿಯಲ್ಲಿ ಬಜರಂಗದಳ ಕಾರ್ಯಕರ್ತರು ಹಲವು ಮುಸ್ಲಿಮ್ ಯುವಕರನ್ನು ಪೊಲೀಸರಿಗೆ ಹಸ್ತಾಂತರಿಸಿದ್ದು, ಈ ಪೈಕಿ ಹಲವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಇದುವರೆಗೂ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ
ಈ ಕುರಿತು ಮಾತನಾಡಿರುವ ಗರ್ಭಾ ಕಾರ್ಯಕ್ರಮದ ಆಯೋಜಕರು, ಬಜರಂಗದಳದ ಸದಸ್ಯರು ಮುಸ್ಲಿಮರಿಗೆ ವಿನಾ ಕಾರಣ ಕಿರುಕುಳ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದು ಸಂಭವಿಸಬಾರದು, ಗರ್ಭಾ ಪೆಂಡಾಲ್ ಗಳು ಯಾವಾಗಲೂ ಎಲ್ಲರಿಗೂ ತೆರೆದಿರುತ್ತವೆ. ಮಹಿಳೆಯರಿಂದ ಕಿರುಕುಳದ ಬಗ್ಗೆ ಯಾವುದೇ ದೂರುಗಳಿಲ್ಲ. ಬಜರಂಗದಳದವರೇ ಕಿರುಕುಳ ಉಂಟು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಮೇಲೆ ಬಜರಂಗದಳ ಹೊರಿಸಿರುವ ಎಲ್ಲ ಆರೋಪಗಳನ್ನು ಮುಸ್ಲಿಮ್ ಯುವಕರು ತಳ್ಳಿಹಾಕಿದ್ದು, ಗರ್ಭಾ ನೃತ್ಯದೆಡೆ ಪ್ರವೇಶಿಸುವ ಯಾವ ಉದ್ದೇಶವೂ ನಮಗೆ ಇರಲಿಲ್ಲ. ನಮ್ಮ ಬೈಕಿನ ಇಂಧನ ಖಾಲಿಯಾದ ಕಾರಣ ರಸ್ತೆಯಲ್ಲಿ ಸುಮ್ಮನೆ ನಿಂತಿದ್ದೆವು. ವಿಡಿಯೋ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಂಟರಿಂದ ಹತ್ತು ಮಂದಿ ಬಜರಂಗದಳದ ಸದಸ್ಯರು ಸುತ್ತುವರಿದು ಹಲ್ಲೆ ನಡೆಸಿದ್ದಾರೆ. ನಮ್ಮ ಮೊಬೈಲ್ ಅನ್ನು ಅವರು ಪರಿಶೀಲಿಸಿದರೂ ಯಾವುದೇ ವಿಡಿಯೋ ಇರಲಿಲ್ಲ ಎಂದು 19 ವರ್ಷದ ಮುಹಮ್ಮದ್ ಕೈಫ್ ಹೇಳಿಕೆ ನೀಡಿದ್ದಾರೆ.
ನಾವು ವರ್ಷಗಳಿಂದ ಗರ್ಭಾ ನೃತ್ಯ ನೋಡಲು ಹೋಗುತ್ತಿದ್ದೆವು. ಯಾರಿಗೂ ಸಮಸ್ಯೆ ಇರಲಿಲ್ಲ. ಈ ವರ್ಷದಿಂದ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತಿದ್ದು, ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದು ಇಂಧೋರ್ ನಿವಾಸಿ ಅಬ್ದುಲ್ ಹೇಳಿದ್ದಾರೆ.
ಗರ್ಭಾ ಪೆಂಡಲ್’ಗಳು ಲವ್ ಜಿಹಾದ್’ನ ಕೇಂದ್ರಗಳಾಗುತ್ತಿವೆ ಮತ್ತು ದುರ್ಗಾ ದೇವಿಯ ಮೇಲೆ ನಂಬಿಕೆಯಿಲ್ಲದವರು ಗರ್ಭಾದ ಕಡೆಗೆ ಹೋಗಬಾರದು ಎಂದು ರಾಜ್ಯ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಭಾಷಣ ಮಾಡಿದ್ದರು.
ಈ ಮಧ್ಯೆ ಗರ್ಭಾ ಪ್ರವೇಶಕ್ಕೆ ಮೊದಲು ತಮ್ಮ ಗುರುತಿನ ಚೀಟಿ ತೋರಿಸುವುದನ್ನು ಕಡ್ಡಾಯಗೊಳಿಸಲು ಗೃಹ ಸಚಿವ ನರೋತ್ತಮ್ ಮಿಶ್ರಾ ಸೂಚಿಸಿದ್ದರು. ಮಧ್ಯಪ್ರದೇಶ ಸರ್ಕಾರದ ಸಂಸ್ಕೃತಿ ಸಚಿವರು ಹಿಂದೂ ಹಬ್ಬದ ಸ್ಥಳಗಳಿಗೆ ಭೇಟಿ ನೀಡುವ ಮುಸ್ಲಿಮರ ವಿರುದ್ಧ ಮಾಡಿದ ದ್ವೇಷಭಾಷಣದ ಬಳಿಕ ಈ ಬೆಳವಣಿಗೆಗಳು ನಡೆದಿವೆ.