ಬೆಂಗಳೂರು: ರಾಜ್ಯದ ಹಲವು ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಿಗಳನ್ನು ಬಹಿಷ್ಕರಿಸುವಂತೆ ಕರೆ ಕೊಡುತ್ತಿರುವ ಸಂಘಪರಿವಾರದ ನಡೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಧರ್ಮದ ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ವಿಕಾಸ ಮತ್ತು ಅಭಿವೃದ್ದಿಯ ಬಗ್ಗೆ ಮಾತನಾಡಿಕೊಂಡು ಬಂದಿದ್ದಾರೆಯೇ ಹೊರತು ಹಿಂದುತ್ವದ ಬಗ್ಗೆ ಈ ತನಕ ಮಾತನಾಡಿಲ್ಲ. ಆದರೆ ನಾವು ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ದೇವಾಸ್ಥಾನದ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ ಹೇರುವುದು ಸರಿಯಲ್ಲ. ಸಂಘಪರಿವಾರ ಮತ್ತು ಬಿಜೆಪಿಯ ಈ ನಡೆಯನ್ನು ಒಪ್ಪಲು ಸಾಧ್ಯವಿಲ್ಲ. ದೇವಸ್ಥಾನದಲ್ಲಿ ಬಾಳೆಹಣ್ಣು, ಹೂವು, ಬಳೆ ಮಾರಿಕೊಂಡು ಬದಕು ದೂಡುತ್ತಿರುವವರಿಗೆ ತೊಂದರೆ ನೀಡುವುದು ಸರಿಯಲ್ಲ. ಜಾತಿ, ಧರ್ಮ, ಪಕ್ಷವನ್ನು ಮರೆತು ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸೋಣ ಎಂದು ಅವರು ಕರೆ ನೀಡಿದರು.
ಮುಸ್ಲಿಮರು ಈ ದೇಶದವರಲ್ಲವೇ, ಇದು ಕೂಡು ಅಸ್ಪೃಶ್ಯತೆಯ ಇನ್ನೊಂದು ಮುಖ. ಜಗತ್ತಿನ ಮುಸ್ಲಿಮ್ ರಾಷ್ಟ್ರಗಳು ಭಾರತೀಯರನ್ನು ಬಹಿಷ್ಕರಿಸಿದರೆ, ಅಲ್ಲಿಂದ ವಾಪಾಸು ಬರುವವರಿಗೆ ಉದ್ಯೋಗ ಕೊಡಲು ನಮ್ಮಿಂದ ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.