Home ಟಾಪ್ ಸುದ್ದಿಗಳು ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ: ದ್ವೇಷ ಹರಡಲು ಬಿಜೆಪಿ ಕಾರಣ ಎಂದ ರಾಹುಲ್, ಪ್ರಿಯಾಂಕಾ ಗಾಂಧಿ

ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ: ದ್ವೇಷ ಹರಡಲು ಬಿಜೆಪಿ ಕಾರಣ ಎಂದ ರಾಹುಲ್, ಪ್ರಿಯಾಂಕಾ ಗಾಂಧಿ

ಮುಝಫ್ಫರ್ ನಗರ: ಮುಸ್ಲಿಂ ವಿದ್ಯಾರ್ಥಿಯ ಕೆನ್ನೆಗೆ ಹೊಡೆಯುವಂತೆ ಹಿಂದೂ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿರುವ ಶಿಕ್ಷಕಿಯೊಬ್ಬರ ಆಘಾತಕಾರಿ ವಿಡಿಯೊ ವೈರಲ್ ಆಗಿದ್ದು, ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.


ಘಟನೆ ಬಗ್ಗೆ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮುಗ್ಧ ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ವಿಷ ಬೀಜವನ್ನು ಬಿತ್ತುವುದು, ಶಾಲೆಯಂತಹ ಪವಿತ್ರ ಸ್ಥಳವನ್ನು ದ್ವೇಷದ ಮಾರುಕಟ್ಟೆಯನ್ನಾಗಿ ಮಾಡುವುದು ತಪ್ಪು. ಶಿಕ್ಷಕನಾದವನು ದೇಶಕ್ಕಾಗಿ ಉತ್ತಮ ಪ್ರಜೆಯನ್ನು ರೂಪಿಸಬೇಕು. ಭಾರತದ ಮೂಲೆ ಮೂಲೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೇಶದಲ್ಲಿ ದ್ವೇಷ ಹರಡಲು ಬಿಜೆಪಿಯೇ ಕಾರಣ. ಮಕ್ಕಳು ಭಾರತದ ಭವಿಷ್ಯ, ಅವರನ್ನು ದ್ವೇಷಿಸಬೇಡಿ, ನಾವೆಲ್ಲರೂ ಒಟ್ಟಾಗಿ ಪ್ರೀತಿಯಿಂದ ಕಲಿಸಬೇಕಾಗಿದೆ” ಎಂದು ಹೇಳಿದ್ದಾರೆ.


ಇನ್ನು ಘಟನೆಯನ್ನು ಖಂಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ” ನಮ್ಮ ಮುಂದಿನ ಪೀಳಿಗೆಗೆ ನಾವು ಯಾವ ರೀತಿಯ ತರಗತಿ, ಯಾವ ರೀತಿಯ ಸಮಾಜವನ್ನು ನೀಡಲು ಬಯಸುತ್ತೇವೆ?. ಚಂದ್ರನಲ್ಲಿಗೆ ಹೋಗುವ ತಂತ್ರಜ್ಞಾನದ ಬಗ್ಗೆಯೋ ಅಥವಾ ದ್ವೇಷದ ಗಡಿ ಗೋಡೆಯನ್ನು ನಿರ್ಮಿಸುವ ಬಗ್ಗೆಯೋ?. ದ್ವೇಷವೇ ಪ್ರಗತಿಯ ದೊಡ್ಡ ಶತ್ರು. ನಮ್ಮ ದೇಶಕ್ಕಾಗಿ, ಪ್ರಗತಿಗಾಗಿ, ಮುಂದಿನ ಪೀಳಿಗೆಗಾಗಿ ಈ ದ್ವೇಷದ ವಿರುದ್ಧ ನಾವು ಒಗ್ಗೂಡಿ ಮಾತನಾಡಬೇಕಾಗಿದೆ ” ಎಂದು ತಿಳಿಸಿದ್ದಾರೆ. ಹಾಗೆಯೇ, ಘಟನೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version