ಭೋಪಾಲ್ : ಭೋಪಾಲದ ದಾನಿಶ್ ಸಿದ್ದಿಕಿ ಮತ್ತು ಸದ್ದಾಂ ಖುರಾಶಿ ಎಂಬ ಇಬ್ಬರು ಮುಸ್ಲಿಮ್ ಯುವಕರಿಗೆ ಭಾರತದಲ್ಲಿ ಕೋವಿಡ್ ಎರಡನೇ ಅಲೆ ಅಪ್ಪಳಿಸಿದಂದಿನಿಂದ ಬಿಡುವೇ ಇಲ್ಲದಂತಾಗಿದೆ. ಈ ಇಬ್ಬರು ಯುವಕರು ತಮ್ಮ ಸ್ವಂತ ಜೀವವನ್ನು ಲೆಕ್ಕಿಸದೆ ಭೋಪಾಲದ ಹಿಂದೂ ರುದ್ರಭೂಮಿಯಲ್ಲಿ ಕೋವಿಡ್ ಪೀಡಿತರಾಗಿ ಮೃತರಾದವರ ಮೃತದೇಹಗಳನ್ನು ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. ಕೋವಿಡ್ ಭಾದಿತರಾಗುವ ಭೀತಿಯಿಂದ ಕುಟುಂಬಿಕರು ಅಂತ್ಯ ಸಂಸ್ಕಾರ ಕಾರ್ಯದಿಂದ ದೂರವುಳಿದ ಸಂದರ್ಭದಲ್ಲಿ ಈ ಇಬ್ಬರು ಯುವಕರು ಮುಂದೆ ಬಂದು ಆ ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸುತ್ತಿದ್ದಾರೆ. ಇದುವರೆಗೆ ಈ ಇವರು ಒಟ್ಟು 60 ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ ಎನ್ನಲಾಗಿದೆ.
ಕುಟುಂಬಿಕರು ತ್ಯಜಿಸಿದಂತಹಾ ಮೃತದೇಹಗಳನ್ನು ಮತ್ತು ಅದೇ ರೀತಿ ಸರ್ಕಾರಿ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಮೃತರ ಕುಟುಂಬಿಕರಿಗೆ ಅಂತ್ಯ ಸಂಸ್ಕಾರಗಳಲ್ಲಿ ಭಾಗವಹಿಸಲು ಸಾಧ್ಯವಾಗದಂತಹಾ ಸಂದರ್ಭಗಳಲ್ಲಿ ನಾವು ಆ ಮೃತದೇಹಗಳ ಅಂತ್ಯ ಸಂಸ್ಕಾರವನ್ನು ಅವರ ಧರ್ಮಗಳ ನಂಬಿಕೆಯ ಪ್ರಕಾರ ನಡೆಸುತ್ತೇವೆ ಎಂದು ಯುವಕರು ತಮ್ಮ ಸೇವೆಯ ಬಗ್ಗೆ ಹೇಳುತ್ತಾರೆ.
ರಮಝಾನಿನ ಉಪವಾಸದ ಈ ಸಂದರ್ಭದಲ್ಲಿಯೂ ಇವರಿಬ್ಬರು ನಿರಂತರವಾಗಿ ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿ ಕೊಟ್ಟು ಅಲ್ಲಿ ಕೋವಿಡ್ ಪೀಡಿತ ಮೃತದೇಹಗಳ ವಿಲೇವಾರಿಗೆ ಮುಂದಾಗುತ್ತಾರೆ. ಈ ಇಬ್ಬರು ಯುವಕರ ಮಾನವೀಯತೆಯ ಕಾರ್ಯ ಇಡೀ ದೇಶದಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ. ಸಾಮಾಜಿಕ ತಾಣಗಳಲ್ಲಿ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹಲವರು ಟ್ವೀಟ್ ಮಾಡಿದ್ದಾರೆ.
ಈ ನಡುವೆ ಗುಜರಾತಿನ ವಡೋದರಲದಲ್ಲಿರುವ ಖಶ್ವಾಡಿ ಚಿತಾಗಾರದಲ್ಲಿ ರಾಶಿ ಬಿದ್ದಿರುತ್ತಿದ್ದ ಕೋವಿಡ್ ಪೀಡಿತರ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದ ಮುಸ್ಲಿಮರನ್ನು ಅಲ್ಲಿಂದ ತೆರವುಗೊಳಿಸುವಂತೆ ಬಿಜೆಪಿ ನಾಯಕರು ಒತ್ತಾಯಪಡಿಸಿದ್ದು ಇಲ್ಲಿ ಉಲ್ಲೇಖಾರ್ಹ.