Home ಟಾಪ್ ಸುದ್ದಿಗಳು ಒಂದಕ್ಕಿಂಥ ಹೆಚ್ಚು ಮದುವೆಯ ನೋಂದಣಿಗೆ ಮುಸ್ಲಿಂ ಪುರುಷ ಅರ್ಹ: ಬಾಂಬೆ ಹೈಕೋರ್ಟ್

ಒಂದಕ್ಕಿಂಥ ಹೆಚ್ಚು ಮದುವೆಯ ನೋಂದಣಿಗೆ ಮುಸ್ಲಿಂ ಪುರುಷ ಅರ್ಹ: ಬಾಂಬೆ ಹೈಕೋರ್ಟ್

ಮುಂಬೈ: ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಪುರುಷನಿಗೆ ಒಂದಕ್ಕಿಂತ ಹೆಚ್ಚು ವಿವಾಹವಾಗುವ ಅವಕಾಶವಿದ್ದು, ಅದನ್ನು ನೋಂದಾಯಿಸಿಕೊಳ್ಳಬಹುದು ಎಂದು ಬಾಂಬೆ ಹೈಕೋರ್ಟ್ ಇಂದು ಹೇಳಿದೆ.


ಮುಸ್ಲಿಂ ವ್ಯಕ್ತಿಯೊಬ್ಬ ಅಲ್ಜೀರಿಯಾದ ತನ್ನ ಮೂರನೇ ಪತ್ನಿ ನಡುವಿನ ಮದುವೆಯ ನೋಂದಣಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಬಿ.ಪಿ. ಕೊಲಬವಾಲಾ ಹಾಗೂ ನ್ಯಾ. ಸೋಮಶೇಖರ ಸುಂದರೇಶನ್ ಅವರಿದ್ದ ಪೀಠವು, ಇದರ ಸಾಧ್ಯತೆ ಕುರಿತು ವಿವಾಹ ಉಪನೋಂದಣಾಧಿಕಾರಿಗೆ ಅ. 15ರಂದು ನಿರ್ದೇಶಿಸಿತ್ತು.


‘ಅರ್ಜಿದಾರ ಮೂರನೇ ಮದುವೆಯಾಗುತ್ತಿದ್ದು, ಮಹಾರಾಷ್ಟ್ರ ವಿವಾಹ ನಿಯಂತ್ರಣ ಹಾಗೂ ನೋಂದಣಿ ಕಾಯ್ದೆಯಡಿ ಸಿಂಧುವಲ್ಲ’ ಎಂದು ಪ್ರಾಧಿಕಾರವು ಹೈಕೋರ್ಟ್ ಗೆ ತಿಳಿಸಿತ್ತು. ಜತೆಗೆ, ಯಾವುದೇ ವ್ಯಕ್ತಿಗೆ ಒಂದು ವಿವಾಹಕ್ಕಷ್ಟೇ ಅವಕಾಶವಿದ್ದು, ಬಹು ಪತ್ನಿತ್ವಕ್ಕೆ ಅವಕಾಶವಿಲ್ಲ’ ಎಂದಿತ್ತು.


ಇದನ್ನು ಪ್ರಶ್ನಿಸಿದ್ದ ದಂಪತಿ, ತಾವು ಠಾಣೆಯ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದು, ವಿವಾಹ ನೋಂದಣಿ ಪ್ರಮಾಣಪತ್ರವನ್ನು ವಿತರಿಸುವಂತೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು.


‘ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ನಾಲ್ಕು ಪತ್ನಿಯರನ್ನು ಏಕಕಾಲಕ್ಕೆ ಹೊಂದಬಹುದು ಎಂದು ಹೇಳಲಾಗಿದೆ. ಹೀಗಿರುವಾಗ, ಮಹಾರಾಷ್ಟ್ರ ವಿವಾಹ ಬ್ಯೂರೊ ನಿಯಂತ್ರಣ ಹಾಗೂ ನೋಂದಣಿ ಕಾಯ್ದೆಯಡಿ ಪ್ರಾಧಿಕಾರದ ಉತ್ತರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರಾಧಿಕಾರವು ಮುಸ್ಲಿಂ ಪುರುಷರ ದೃಷ್ಟಿಕೋನದಿಂದ ಕಾನೂನನ್ನೇ ತಪ್ಪಾಗಿ ಅರ್ಥೈಸಿಕೊಂಡಿದೆ’ ಎಂದು ಪೀಠವು ಅಭಿಪ್ರಾಯಪಟ್ಟಿತು.


‘ಪ್ರಾಧಿಕಾರದ ನಿಲುವು ಗಮನಿಸಿದರೆ, ಮಹಾರಾಷ್ಟ್ರದಲ್ಲಿರುವ ಕಾನೂನಿನಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ತಿರಸ್ಕರಿಸಲಾಗಿದೆ ಅಥವಾ ಅದಕ್ಕೆ ಪರ್ಯಾಯವಾಗಿದೆ ಎಂದೇ ಪರಿಗಣಿಸಬೇಕಾಗುತ್ತದೆ. ಮುಸ್ಲಿಮರ ವೈಯಕ್ತಿಕ ಕಾನೂನನ್ನು ಪರಿಗಣಿಸಲಾಗದು ಎಂದು ಹೇಳಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಪೀಠ ಹೇಳಿದೆ.

Join Whatsapp
Exit mobile version