Home ಟಾಪ್ ಸುದ್ದಿಗಳು ಶಿಸ್ತಿನ ಹೆಸರಿನಲ್ಲಿ ಸಂವಿಧಾನಾತ್ಮಕ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸದಂತೆ ಮುಸ್ಲಿಮ್ ಒಕ್ಕೂಟದಿಂದ ಠರಾವು ಮಂಡನೆ

ಶಿಸ್ತಿನ ಹೆಸರಿನಲ್ಲಿ ಸಂವಿಧಾನಾತ್ಮಕ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸದಂತೆ ಮುಸ್ಲಿಮ್ ಒಕ್ಕೂಟದಿಂದ ಠರಾವು ಮಂಡನೆ

ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕೇಂದ್ರ ಸಮಿತಿಯ ಸಭೆಯು ಕಾಪುವಿನಲ್ಲಿ ನಡೆಯಿತು. ವಿವಿಧ ಸಾಮುದಾಯಿಕ ವಿಷಯಗಳೊಂದಿಗೆ ವಿದ್ಯಾರ್ಥಿನಿಯರ ಶಿರವಸ್ತ್ರದ ವಿವಾದದ ಕುರಿತೂ ಚರ್ಚೆ ನಡೆಯಿತು. ಸಭೆಯಲ್ಲಿ ಈ ಕೆಳಗಿನ ಠರಾವುಗಳನ್ನು ಮಂಡಿಸಲಾಯಿತು.

1. ಪ್ರೌಢಾವಸ್ಥೆಗೆ ತಲುಪಿದ ಹೆಣ್ಣು ಮಕ್ಕಳಿಗೆ ಇಸ್ಲಾಮ್ ಧರ್ಮದಲ್ಲಿ ಶಿರವಸ್ತ್ರಧಾರಣೆ ಧಾರ್ಮಿಕ ಕರ್ತವ್ಯವಾಗಿದೆ. ಇದಕ್ಕೆ ದೇಶದ ಸಂವಿಧಾನವೂ ಮುಕ್ತ ಅವಕಾಶ ನೀಡಿದೆ. ಆದ್ದರಿಂದ ದೇಶದ ಸಂವಿಧಾನಕ್ಕೆ ಅನುಸಾರವಾಗಿ ನಡೆಯುವ ಯಾವುದೇ ಸಂಸ್ಥೆಯು ಇದಕ್ಕೆ ಅಡ್ಡಿಯುಂಟು ಮಾಡಬಾರದು.

2. ವಿದ್ಯಾಸಂಸ್ಥೆಗಳಿಗೆ ಸಂಬಂಧಿಸಿದ ಯಾವುದೇ ನಿಯಮ ಅಥವಾ ಉಪನಿಯಮಗಳನ್ನು, ಯಾವುದೇ ಜಾತಿ, ಧರ್ಮ, ವರ್ಗ, ಸಮುದಾಯ, ಅಥವಾ ಸಂಪ್ರದಾಯದವರು ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾಗದಂತೆ ಸಂವೇದನಾಶೀಲವಾಗಿ ರಚಿಸಬೇಕು. ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಉದ್ದೇಶ ಮಕ್ಕಳಿಗೆ ಶಿಕ್ಷಣ ನೀಡುವುದು ಆಗಿರಬೇಕೇ ಹೊರತು ಇತರರ ಆಚರಣೆಗಳನ್ನು ತಡೆಯುವುದು ಅಥವಾ ತಮ್ಮ ಆಚರಣೆಗಳನ್ನು ಅವರ ಮೇಲೆ ಹೇರುವುದು ಆಗಿರಬಾರದು.

3. ಭಾರತದಂತಹ ವೈವಿಧ್ಯಪೂರ್ಣ ದೇಶದಲ್ಲಿ ಶಿಕ್ಷಣ ಸಂಬಂಧಿ ನಿಲುವು ಮತ್ತು ನಿಯಮಗಳು ಸಾಂಸ್ಕೃತಿಕ, ಸಾಮುದಾಯಿಕ ಮತ್ತು ಸ್ಥಳೀಯ ನಂಬಿಕೆಗಳು, ಭಾವನೆಗಳು ಮತ್ತು ಆಚರಣೆಗಳ ಬಗ್ಗೆ ಸಂವೇದನಾಶೀಲವಾಗಿರಬೇಕು.

4. ಉಡುಪಿಯ ಬಾಲಕಿಯರ ಸರಕಾರೀ ಪದವಿಪೂರ್ವ ಕಾಲೇಜಿನಲ್ಲಿ ಶಿರವಸ್ತ್ರ ಧಾರಣೆಯ ಕುರಿತು ಎಬ್ಬಿಸಲಾಗಿರುವ ವಿವಾದವನ್ನು ಸಂವಿಧಾನದ ಚೌಕಟ್ಟಿನಲ್ಲಿ ಬಗೆಹರಿಸಬೇಕು, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟವು ಈ ದಿಸೆಯಲ್ಲಿ ಪ್ರಯತ್ನಗಳನ್ನು ಮಾಡಿದೆ. ಆದರೆ ಶಾಲಾ ಪ್ರಾಂಶುಪಾಲರು, ಬೋಧಕ ವರ್ಗ ಮತ್ತು ಕಾಲೇಜು ಅಭಿವೃದ್ಧಿ ಮಂಡಳಿಯು ಭಾರತೀಯ ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾದ ತೀರಾ ಸಂಕುಚಿತ ಹಾಗೂ ನಕಾರಾತ್ಮಕ ನಿಲುವನ್ನು ತಾಳಿರುವುದು ಸಮಸ್ಯೆಯ ಪರಿಹಾರಕ್ಕೆ ದೊಡ್ಡ ತಡೆಯಾಗಿ ಪರಿಣಮಿಸಿತು. ಆದ್ದರಿಂದ ಶಾಲೆಯ ಹಂತದಲ್ಲಿ ಪರಿಹರಿಸಬಹುದಾದ ವಿಷಯ ಒಂದು ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿತು.

5. ಸ್ಕಾರ್ಫ್ ಧಾರಣೆ ಯಾವುದೇ ಸಮವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವುದಿಲ್ಲ. ಸ್ಕಾರ್ಫ್ ಧರಿಸಬಯಸುವ ವಿದ್ಯಾರ್ಥಿನಿಯರು ಶಾಲೆಯ ಸಮವಸ್ತ್ರ ನಿಯಮದಲ್ಲಿ ತಿಳಿಸಲಾಗಿರುವ ಬಣ್ಣಕ್ಕೆ ಅನುಸಾರವಾದ ಸ್ಕಾರ್ಫ್ ಧರಿಸಲು ಸಿದ್ಧರಾಗಿದ್ದು ಅವರ ಈ ಬೇಡಿಕೆ ನ್ಯಾಯೋಚಿತವಾಗಿದೆ ಎಂಬುದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ನಿಲುವಾಗಿದೆ.

6. ಒಟ್ಟು ಸಮಾಜ ಮತ್ತು ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುಸ್ಲಿಂ ಸಮಾಜದ ನಾಯಕರು ಮತ್ತು ಸಂಘಟನೆಗಳು ವ್ಯಕ್ತಿಗತವಾಗಿ ಅಥವಾ ಕೇವಲ ತಮ್ಮ ಸಂಘಟನೆಯ ಮಟ್ಟದಲ್ಲಿ ನಿರ್ಣಯಗಳನ್ನು ಕೈಗೊಳ್ಳದೆ ಸಮುದಾಯದ ಇತರ ಸಂಘಟನೆಗಳೊಂದಿಗೆ ಸಮಾಲೋಚಿಸಿ ಸಾಮೂಹಿಕ ನಿರ್ಣಯಗಳಿಗೆ ಅನುಸಾರವಾದ ನಿಲುವನ್ನು ತಳೆಯಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟವು ಆಗ್ರಹಿಸುತ್ತದೆ.

7. ರಾಜಕೀಯ ಪಕ್ಷಗಳು ಮತ್ತು ಅವುಗಳಿಂದ ಬೆಂಬಲಿತ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ನಡೆಸಬಾರದು ಮತ್ತು ವಿದ್ಯಾರ್ಥಿಗಳ ಧಾರ್ಮಿಕ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯುವ ಅಥವಾ ವಿದ್ಯಾರ್ಥಿಗಳನ್ನು ಪರಸ್ಪರ ಸಂಘರ್ಷಕ್ಕೆ ಪ್ರಚೋದಿಸುವಂತಹ ಚಟುವಟಿಕೆಗಳನ್ನು ನಡೆಸಬಾರದು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟವು ಆಗ್ರಹಿಸಿದೆ.

Join Whatsapp
Exit mobile version