Home ಟಾಪ್ ಸುದ್ದಿಗಳು ಮುಸ್ಲಿಂ ಯುವತಿ, ಹಿಂದೂ ಹುಡುಗ ಮದುವೆ: ಪೊಲೀಸರ ವಿರುದ್ಧ ಹಿಂದುತ್ವ ಸಂಘಟನೆ ಪ್ರತಿಭಟನೆ!

ಮುಸ್ಲಿಂ ಯುವತಿ, ಹಿಂದೂ ಹುಡುಗ ಮದುವೆ: ಪೊಲೀಸರ ವಿರುದ್ಧ ಹಿಂದುತ್ವ ಸಂಘಟನೆ ಪ್ರತಿಭಟನೆ!

ಬಾಗಲಕೋಟೆ: ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು, ಈ ವೇಳೆ ಹಿಂದೂ ಕಾರ್ಯಕರ್ತರು, ಯುವತಿ ಕುಟುಂಬಸ್ಥರು ಆಗಮಿಸಿದ್ದರು. ಇದೇ ವೇಳೆ ಬಾಗಲಕೋಟೆ ನಗರದಲ್ಲಿ ನವನಗರ ಠಾಣೆ ಸಿಪಿಐ ರಾಮಣ್ಣ ಬಿರಾದಾರ ವಿರುದ್ಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಮುಸ್ಲಿಂ‌ ಸಮುದಾಯದ ಪರ ಪೊಲೀಸರು ಇದ್ದಾರೆ ಎಂದು ಆರೋಪಿಸಿ ನವನಗರ ಠಾಣೆ ಸಿಪಿಐ ರಾಮಣ್ಣ ಬಿರಾದಾರ ವಿರುದ್ಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

ಹಿಂದೂ ಸಂಘಟನೆ ಪ್ರತಿಭಟನೆ ವೇಳೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನಲೆ ಹಿಂದೂ ಪರ ಸಂಘಟನೆಗಳ ಮನೋಜ್, ಕುಮಾರಸ್ವಾಮಿ ಮತ್ತು ವಿಕ್ರಮ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಪೊಲೀಸ್​​ ವರಿಷ್ಠಾಧಿಕಾರಿ ಅಮರನಾಥ್​ ರೆಡ್ಡಿ ಭೇಟಿ ನೀಡಿದ್ದಾರೆ.

ಎಸ್​ಪಿ ಜೊತೆ ಚರಂತಿಮಠ ಮಾತುಕತೆ ನಡೆಸಿ, ಸಿಪಿಐ ರಾಮಣ್ಣ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಎಸ್​​ಪಿ ಅಮರನಾಥ್ ರೆಡ್ಡಿ ಒಪ್ಪಿದ್ದಾರೆ ಎನ್ನಲಾಗಿದೆ. ಈ ವಿಚಾರದ ಸಂಪೂರ್ಣ ಮಾಹಿತಿ ತಿಳಿದು ಬರಬೇಕಷ್ಟೇ.

Join Whatsapp
Exit mobile version