Home ಟಾಪ್ ಸುದ್ದಿಗಳು ಬಿಹಾರದಲ್ಲಿ ವಿದ್ಯುತ್ ದುರಸ್ತಿಗೆಂದು ಕರೆದುಕೊಂಡು ಹೋಗಿ ಎಲೆಕ್ಟ್ರಿಶಿಯನನ್ನು ಗುಂಪು ಹತ್ಯೆಗೈದ ಹಂತಕರ ತಂಡ !

ಬಿಹಾರದಲ್ಲಿ ವಿದ್ಯುತ್ ದುರಸ್ತಿಗೆಂದು ಕರೆದುಕೊಂಡು ಹೋಗಿ ಎಲೆಕ್ಟ್ರಿಶಿಯನನ್ನು ಗುಂಪು ಹತ್ಯೆಗೈದ ಹಂತಕರ ತಂಡ !

►ಕಳೆದ ವರ್ಷ ನಡೆದಿದ್ದ ಗುಂಪು ಹತ್ಯೆಯಲ್ಲೂ ಪಾಲ್ಗೊಂಡಿದ್ದ ಆರೋಪಿ ದೋಮರ್ ಯಾದವ್!

ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿ 30 ವರ್ಷದ ಎಲೆಕ್ಟ್ರಿಶಿಯನ್ ಮೊಹಮ್ಮದ್ ಇಸ್ಮಾಯಿಲ್ ಎಂಬವರನ್ನು ಗುಂಪು ಹತ್ಯೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರೂಪೇಶ್ ಯಾದವ್ ಎಂಬ ಹಂತಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಕುಟುಂಬದವರು ಹೇಳುವ ಪ್ರಕಾರ, ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿರುವ ಮೊಹಮ್ಮದ್ ಇಸ್ಮಾಯೀಲ್ ಅವರು ಭಾನುವಾರ ರಾತ್ರಿ ತನ್ನ ಪ್ರದೇಶದಲ್ಲಿನ ಕಂಬದಲ್ಲಿ ವಿದ್ಯುತ್ ಕೇಬಲ್ ಅಳವಡಿಸುತ್ತಿದ್ದರು. ಈ ವೇಳೆ ಮೋಟಾರು ಬೈಕಿನಲ್ಲಿ ಬಂದ ಬಂದ ಇಬ್ಬರ ತಂಡವೊಂದು ನಮ್ಮ ಪ್ರದೇಶದಲ್ಲಿ ಕೆಲವೊಂದು ವಿದ್ಯುತ್ ದುರಸ್ತಿ ಕೆಲಸಗಳು ಆಗಬೇಕಿದೆ. ನಮ್ಮೊಂದಿಗೆ ಬರುವಂತೆ ಹೇಳಿ ಇಸ್ಮಾಯೀಲ್ ಅವರನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆ ಬಳಿಕ ಇಸ್ಮಾಯೀಲ್ ವಾಪಾಸ್ ಬಂದಿರಲಿಲ್ಲ. ಈ ತಂಡವೇ ಇಸ್ಮಾಯೀಲ್ ಅವರನ್ನು ಕೊಂದಿದೆ ಎಂದು ಅವರ ಚಿಕ್ಕಪ್ಪ ಮೊಯಿನ್ ಅಹ್ಮದ್ ಹೇಳಿದ್ದಾರೆ. ಬಲ್ವಾಯಿ ಗ್ರಾಮದ ನಿವಾಸಿಯಾಗಿರುವ ಇಸ್ಮಾಯಿಲ್ ಅವರು ಪತ್ನಿ ಮಸರತ್, ಮೂವರು ಮಕ್ಕಳು ಮತ್ತು 70 ವರ್ಷದ ತಂದೆ ಶೋಯಿಬ್ ಅವರನ್ನು ಅಗಲಿದ್ದಾರೆ.

ಕೊಲೆಗೈದ ಹಂತಕರ ತಂಡವನ್ನು ದೋಮರ್ ಯಾದವ್, ಸಸ್ತಾನ್ ಯಾದವ್, ಚೋಟ ಯಾದವ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಚಸಾಯ್ ಗ್ರಾಮದ ಯಾದವ ಸಮುದಾಯದ ಯುವಕರಾಗಿದ್ದಾರೆ ಎನ್ನಲಾಗಿದೆ. ಇವರಲ್ಲಿ ದೋಮರ್ ಯಾದವ್ ಕಳೆದ ವರ್ಷ ಈ ಪ್ರದೇಶದಲ್ಲಿ ನಡೆದಿದ್ದ ಗುಂಪು ಹತ್ಯೆಯಲ್ಲಿ ಕೂಡಾ ಪಾಲ್ಗೊಂಡಿದ್ದ ಎನ್ನಲಾಗಿದೆ.

ಆದರೆ ಎಂದಿನಂತೆ ಪೊಲೀಸರ ನಡೆ ಇಲ್ಲಿಯೂ ಸಂದೇಹಾಸ್ಪದವಾಗಿದೆ. ಇಸ್ಮಾಯೀಲ್ ಮತ್ತು ಇನ್ನೋರ್ವ ಮನೆಯೊಂದರಲ್ಲಿ ಕಳ್ಳತನಕ್ಕೆಂದು ಹೋಗಿದ್ದರು. ಆ ವೇಳೆ ಇನ್ನೋರ್ವ ತಪ್ಪಿಸಿಕೊಂಡಿದ್ದು, ಇಸ್ಮಾಯೀಲ್ ಅವರು ಗುಂಪಿನ ಕೈಗೆ ಸಿಕ್ಕಿ ಹಾಕಿಕೊಂಡು, ಅವರಿಂದ ಥಳಿಸಲ್ಪಟ್ಟು ಕೊಲೆಯಾಗಿದ್ದಾರೆ ಎಂದು ಜೋಕಿಹತ್ ಪೊಲೀಸ್ ಠಾಣೆಯ ಅಧಿಕಾರಿ ವಿಕಾಸ್ ಕುಮಾರ್ ‘ಕ್ಲಾರಿಯಾನ್’ ಗೆ ತಿಳಿಸಿದ್ದಾರೆ.

Join Whatsapp
Exit mobile version