ಭೋಪಾಲ್: ಬಳೆ ಮಾರಾಟ ನಡೆಸುತ್ತಿದ್ದ 25 ಪ್ರಾಯದ ಮುಸ್ಲಿಮ್ ವ್ಯಕ್ತಿಗೆ ದುಷ್ಕರ್ಮಿಗಳ ಗುಂಪೊಂದು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶ ಇಂದೋರ್ ನಲ್ಲಿ ನಡೆದಿದೆ. ಆತನಲ್ಲಿದ್ದ 10 ಸಾವಿರ ರೂಪಾಯಿ ನಗದನ್ನು ದೋಚಲಾಗಿದೆಯೆಂದು ಸಂತ್ರಸ್ತ ಯುವಕ ದೂರಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನೂರಾರು ಮಂದಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಬಳಿಕವಷ್ಟೇ ತಡರಾತ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಸ್ಲೀಮ್ ಎಂಬ ಯುವಕನಿಗೆ ಇಂದೋರ್ ನ ಬಂಗಂಗಾ ಎಂಬ ಜನನಿಬಿಡ ಪ್ರದೇಶದಲ್ಲಿ ಅಪರಿಚಿತರು ಥಳಿಸುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಬಳೆ ವ್ಯಾಪಾರಿಯಾಗಿರುವ ತಸ್ಲೀಮ್ ಗೆ ಹಲ್ಲೆ ನಡೆಸಿದ ಗುಂಪು ನಂತರ ಆತನ ಬಳೆಗಳನ್ನು ಪುಡಿಗಟ್ಟಿ, ಆತನ ಬಳಿಯಿದ್ದ 10 ಸಾವಿರ ರೂಪಾಯಿ ನಗದನ್ನು ದೋಚಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸಂಬಂಧ ಪೊಲೀಸರು ಅಪರಿಚಿತರ ವಿರುದ್ಧ ಗಲಭೆ, ಹಲ್ಲೆ, ದರೋಡೆ, ಬೆದರಿಕೆ ಮತ್ತು ಕೋಮು ಸೌಹಾರ್ದತೆಯನ್ನು ಕದಡಲು ಯತ್ನ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಮಾತ್ರವಲ್ಲದೆ ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿವಿಗೊಡದೆ ಶಾಂತಿ, ಕೋಮು ಸಾಮರಸ್ಯವನ್ನು ಕಾಪಾಡುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.