ಲಕ್ನೋ: ಉತ್ತರ ಪ್ರದೇಶದಲ್ಲಿ ಕೊಲೆ ಪ್ರಕರಣದ ಸಾಕ್ಷಿಯೊಬ್ಬರ ಕೊಲೆ ಸಂಬಂಧ ಸಂಶಯಿತ ವ್ಯಕ್ತಿ ಎನ್ನಲಾದ ಅತಿಕ್ ಅಹ್ಮದ್ ಎಂಬವರ ಮನೆಯ ಮೇಲೆ ಬುಲ್ಡೋಜರ್’ಗಳ ದಾಳಿ ಆರಂಭವಾಗಿದೆ.
2005ರಲ್ಲಿ ನಡೆದ ಕೊಲೆಯೊಂದರ ಮುಖ್ಯ ಸಾಕ್ಷಿಯಾಗಿದ್ದ ರಾಜಕಾರಣಿ ಮತ್ತು ವಕೀಲರಾಗಿದ್ದ ರಮೇಶ್ ಪಾಲ್ ಅವರನ್ನು ಪ್ರಯಾಗ್’ರಾಜ್’ನಲ್ಲಿ ಶುಕ್ರವಾರ ಹಾಡಹಗಲೇ ಕೊಲೆ ಮಾಡಲಾಗಿತ್ತು. ಐವರ ಗುಂಪು ಗುಂಡು ಹಾರಿಸಿ ಕೊಲೆ ಮಾಡಿದಾಗ ಪಾಲ್ ಅವರ ಅಂಗರಕ್ಷಕ ಕೂಡ ಗುಂಡೇಟಿಗೆ ಬಲಿಯಾಗಿದ್ದರು.
ಪೊಲೀಸರ ಪ್ರಕಾರ, ಸಮಾಜವಾದಿ ಪಕ್ಷದ ರಾಜಕಾರಣಿಯಾಗಿ ಬದಲಾಗಿರುವ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಈ ಕೊಲೆಗಳ ಸಂಚುಗಾರ ಎನ್ನಲಾಗಿದೆ.
ಉಮೇಶ್ ಪಾಲ್ ಅವರು ಬಹುಜನ ಸಮಾಜ ಪಕ್ಷದ ಶಾಸಕರಾಗಿದ್ದ ರಾಜು ಪಾಲ್ ಕೊಲೆಯ ನೇರ ಸಾಕ್ಷಿ. ಅತೀಕ್ ಅಹ್ಮದ್ ರಾಜು ಪಾಲ್ ಅವರ ರಾಜಕೀಯ ವೈರಿಯಾಗಿದ್ದ. ಅಹ್ಮದಾಬಾದ್ ಜೈಲಿನಲ್ಲಿರುವ ಅತೀಕ್ ಅಹ್ಮದ್ ತನ್ನ ಐದಾರು ಸಹಚರರನ್ನು ಕಳುಹಿಸಿ ಕೊಲೆ ಮಾಡಿಸಿರುವುದಾಗಿ ಪೊಲೀಸರು ಆಪಾದಿಸಿದ್ದಾರೆ.
ಅತೀಕ್ ಅಹ್ಮದ್, ಮಗ ಅಸದ್ ಅಹ್ಮದ್, ಅವರ ಪತ್ನಿ ಬಿಎಸ್’ಪಿ ನಾಯಕಿ ಸಾಯಿಸ್ತಾ ಪರ್ವೀನ್ ಹೆಸರುಗಳನ್ನು ಎಫ್’ಐಆರ್’ನಲ್ಲಿ ಸೇರಿಸಲಾಗಿದೆ.
ಸೋಮವಾರ ಪೊಲೀಸರು ಪ್ರಕರಣದ ಆರೋಪಿ ಒಬ್ಬನನ್ನು ಎನ್ ಕೌಂಟರ್ ಮಾಡಿದ್ದಾರೆ.
ಪ್ರಯಾಗ್ ರಾಜ್’ನಲ್ಲಿ ಅತೀಕ್ ಅಹ್ಮದ್ ಸಹಾಯಕರಾದ ಜಾಫರ್ ಅಹ್ಮದ್ ಅವರ ಮನೆ ಮೇಲೆ ಮಾರ್ಚ್ 1ರ ಬೆಳಿಗ್ಗೆ ಬುಲ್ಡೋಜರ್’ಗಳನ್ನು ತಂದು ಧ್ವಂಸಗೊಳಿಸಲಾಗಿದೆ. ಜಾಫರ್ ಕೂಡ ಶೂಟೌಟ್ ಬಳಿಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ವರದಿಗಳ ಪ್ರಕಾರ, ಅತೀಕ್ ಅಹ್ಮದ್’ನ ಮಡದಿ ಮತ್ತು ಮಗ ಅದೇ ಬಂಗಲೆಯಲ್ಲಿ ಇದ್ದರು. ಪೊಲೀಸರು ಮನೆಯಲ್ಲಿ ಹುಡುಕಾಡಿದಾಗ ಮಾರಕಾಸ್ತ್ರಗಳು ಸಿಕ್ಕಿವೆ ಎಂದೂ ವರದಿಯಾಗಿದೆ.
ಇದೇ ವೇಳೆ ಬುಧವಾರ ಮಾರ್ಚ್ 1ರಂದು ಪೊಲೀಸರು ಲಕ್ನೋದಲ್ಲಿ ಅತೀಕ್ ಅಹ್ಮದ್ ಮನೆಯ ಮೇಲೆ ದಾಳಿ ಮಾಡಿ ಎರಡು ಐಶಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.