ನ್ಯಾಯಾಧೀಶರ ಕೊಲೆ ಪ್ರಕರಣ| 17 ಮಂದಿ ಬಂಧನ, 243 ಶಂಕಿತರು ವಶಕ್ಕೆ

Prasthutha|

ರಾಂಚಿ: ಜಾರ್ಖಂಡ್‌ನ ಧನಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿಯನ್ನು ಬಂಧಿಸಲಾಗಿದ್ದು, 243 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಸಂಜೀವ್ ಕುಮಾರ್ ತಿಳಿಸಿದ್ದಾರೆ.

- Advertisement -

ಈ ಕುರಿತು ಮಾಹಿತಿ ನೀಡಿದ ಅವರು, ಪ್ರಕರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಬಯಲುಮಾಡಿದ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಭಾನುವಾರ ಸಂಜೆ, ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರುವ ಕೆಲವು ಪ್ರದೇಶಗಳ ಮೇಲೆ ದಾಳಿ ನಡೆಸಿ, 243 ವ್ಯಕ್ತಿಗಳನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿರುವ 53 ಹೋಟೆಲ್‌ಗಳಲ್ಲಿ ಶೋಧ ಕಾರ್ಯ ನಡೆಸಿ ಈ ಘಟನೆಗೆ ಸಂಪರ್ಕವಿರುವ 17 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

- Advertisement -

ನ್ಯಾಯಾಧೀಶರಿಗೆ ಡಿಕ್ಕಿ ಹೊಡೆದ ಆಟೊರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸೂಕ್ತ ದಾಖಲೆಗಳಿಲ್ಲದ 250 ಆಟೊರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಧನಬಾದ್‌ ಪಟ್ಟಣದ ಜಡ್ಜಸ್‌ ಕಾಲೊನಿಯಲ್ಲಿ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಕಳೆದ ಬುಧವಾರ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಆಟೋ ರಿಕ್ಷಾವೊಂದು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದರು.

Join Whatsapp