Home ಟಾಪ್ ಸುದ್ದಿಗಳು ಶಾಲೆಗೆ ಮುತ್ತಿಗೆ ಹಾಕಿ ಗೂಂಡಾಗಿರಿ ಮೆರೆದಿರುವುದು ಆಘಾತಕಾರಿ: ಶಾಸಕ ಕಾಮತ್ ವಿರುದ್ಧ ಕ್ರಮಕ್ಕೆ ಮುನೀರ್ ಕಾಟಿಪಳ್ಳ...

ಶಾಲೆಗೆ ಮುತ್ತಿಗೆ ಹಾಕಿ ಗೂಂಡಾಗಿರಿ ಮೆರೆದಿರುವುದು ಆಘಾತಕಾರಿ: ಶಾಸಕ ಕಾಮತ್ ವಿರುದ್ಧ ಕ್ರಮಕ್ಕೆ ಮುನೀರ್ ಕಾಟಿಪಳ್ಳ ಆಗ್ರಹ

ಮಂಗಳೂರು: ಸೈಂಟ್ ಜೆರೋಸಾ ಶಾಲೆಯಲ್ಲಿ ಹಿಂಸೆಗೆ ಪ್ರಚೋದಿಸಿ ಗೂಂಡಾಗಿರಿ ಮೆರೆದಿರುವ ಶಾಸಕ ವೇದವ್ಯಾಸ ಕಾಮತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸರಕಾರ ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಬಿಜೆಪಿಯ ಶಾಸಕರು ಅಧಿವೇಶನ ತೊರೆದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೊಂದರ ಮೇಲೆ ದಬ್ಬಾಳಿಕೆ ನಡೆಸಿ ಮತೀಯ ಭಾವನೆ ಕೆರಳಿಸಲು ಪ್ರಕರಣವನ್ನು ಬಳಸಿರುವುದು ಖಂಡನೀಯ. ಪ್ರಾಥಮಿಕ ಶಾಲೆಯ ಮುಗ್ಧ ವಿದ್ಯಾರ್ಥಿಗಳನ್ನು ತಮ್ಮದೇ ಶಾಲೆಯ ವಿರುದ್ದ ಮುತ್ತಿಗೆಗೆ ಬಳಸಿ, ಧಾರ್ಮಿಕ ಘೋಷಣೆಗಳನ್ನು ಕೂಗಿಸಿರುವುದು ನಾಚಿಕೆಗೇಡಿನ ಕೃತ್ಯ. ಶಾಸಕನಿಗಿರಬೇಕಾದ ಕನಿಷ್ಟ ಪ್ರಜ್ಞೆ, ಸಮಾಜದ ಭವಿಷ್ಯದ ಕುರಿತು ಕಾಳಜಿ ವೇದವ್ಯಾಸ ಕಾಮತರಿಗೆ ಇಲ್ಲ. ಜಿಲ್ಲಾಡಳಿತ, ಸರಕಾರ ಇಂತಹ ಗೂಂಡಾಗಿರಿಯನ್ನು ಸಹಿಸದೇ ಶಾಸಕ ಕಾಮತ್’ಗೆ ಕಾನೂನಿನ ಪಾಠ ಕಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸೈಂಟ್ ಜೆರೋಸಾ ಶಾಲೆಯ ಶಿಕ್ಷಕಿ ಹಿಂದೂ ಧರ್ಮ ನಿಂದನೆ ಮಾಡಿದ್ದರೆ ಕ್ರಮ ಕೈಗೊಳ್ಳಲು ಕಾನೂನಿನ ವ್ಯವಸ್ಥೆಯಲ್ಲಿ ಕ್ರಮ, ನಿಯಮಗಳಿವೆ. ಆ ಪ್ರಕಾರ ತನಿಖೆ ನಡೆದು ಅಪರಾಧ ಸಾಬೀತಾದರೆ ಶಿಕ್ಷೆ ವಿಧಿಸುವುದು ಸರಿಯಾದ ವಿಧಾನ. ಬೀದಿ ನ್ಯಾಯ ವಿಧಿಸಲು ಇದು ಅರಾಜಕ ದೇಶ ಅಲ್ಲ, ಸರ್ವಾಧಿಕಾರಿಗಳ ನಾಡೂ ಅಲ್ಲ. ಶಾಸಕರಾದವರಿಗೆ ಈ ಜ್ಞಾನ ಇರಬೇಕು. ಶಾಸಕ ವೇದವ್ಯಾಸ ಕಾಮತ್ ಇದನ್ನೆಲ್ಲ ಧಿಕ್ಕರಿಸಿ ಶಾಲೆಗೆ ಮುತ್ತಿಗೆ ಹಾಕಿ ಗೂಂಡಾಗಿರಿ ಮೆರೆದಿರುವುದು ಆಘಾತಕಾರಿ ವಿಚಾರ, ಇದರ ಹಿಂದೆ ಲೋಕಸಭಾ ಚುನಾವಣೆಯ ಸಿದ್ದತೆ ಇರುವುದು ಸ್ಪಷ್ಟ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

Join Whatsapp
Exit mobile version