ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಾಲಿಬಾನ್’ಗೆ ಹೋಲಿಸಿದ್ದಕ್ಕಾಗಿ ಹೂಡಲಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತನಗೆ ಸಮನ್ಸ್ ನೀಡಿದ್ದ ಮ್ಯಾಜಿಸ್ಟ್ರೇಟ್ ಆದೇಶ ಪ್ರಶ್ನಿಸಿ ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಸಲ್ಲಿಸಿದ್ದ ಮನವಿಯನ್ನು ಮುಂಬೈ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವಂತೆ ಅಖ್ತರ್ ಅವರಿಗೆ ಸಮನ್ಸ್ ನೀಡಿದ ಆದೇಶ ಕಾನೂನುಬದ್ಧವಾಗಿದೆ ಎಂದು ಸೆಷನ್ಸ್ ನ್ಯಾಯಾಧೀಶರಾದ ಪ್ರೀತಿ ಕುಮಾರ್ ಘುಲೆ ತೀರ್ಪು ನೀಡಿದ್ದಾರೆ. ಆದೇಶದ ವಿವರವಾದ ಪ್ರತಿ ಇನ್ನಷ್ಟೇ ದೊರೆಯಬೇಕಿದೆ.
ಐಪಿಸಿ ಸೆಕ್ಷನ್ 499 (ಮಾನನಷ್ಟ) ಮತ್ತು 500 (ಮಾನನಷ್ಟಕ್ಕೆ ಶಿಕ್ಷೆ) ಅಡಿಯಲ್ಲಿಅಕ್ಟೋಬರ್ 2021ರಲ್ಲಿ ವಕೀಲ ಸಂತೋಷ್ ದುಬೆ ಅವರು ಸಲ್ಲಿಸಿದ್ದ ಕ್ರಿಮಿನಲ್ ದೂರಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಅವರು ಅಖ್ತರ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು.
ಸಿಆರ್ಪಿಸಿ ಸೆಕ್ಷನ್ 200ರ ಅಡಿಯಲ್ಲಿ ದೂರುದಾರ ಮತ್ತು ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ದಾಖಲಿಸಿಕೊಂಡಿದ್ದ ಮ್ಯಾಜಿಸ್ಟ್ರೇಟ್ ಅವರು ಅಖ್ತರ್ ಅವರಿಗೆ ಡಿಸೆಂಬರ್ 13, 2022ರಂದು ಸಮನ್ಸ್ ನೀಡಿದ್ದರು.
ಸಿಆರ್’ಪಿಸಿ ಅಡಿಯಲ್ಲಿ ನಿಗದಿಪಡಿಸಿದಂತೆ ಯಾವುದೇ ವಿಚಾರಣೆ ನಡೆಸದೆ ಮ್ಯಾಜಿಸ್ಟ್ರೇಟ್ ಅವರು ಸಮನ್ಸ್ ಜಾರಿ ಮಾಡಿದ್ದಾರೆ ಎಂಬ ಕಾರಣಕ್ಕೆ ಆದೇಶ ಪ್ರಶ್ನಿಸಿ ಅಖ್ತರ್ ಅವರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಆದೇಶವು ಯಾಂತ್ರಿಕ ಸ್ವರೂಪದ್ದಾಗಿದ್ದು ಹೇಳಿಕೆಗಳನ್ನು ನೀಡಿದ ಸಂದರ್ಭಗಳನ್ನು ಪರಿಗಣಿಸದೆ ತರಾತುರಿಯಲ್ಲಿ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.
(ಕೃಪೆ: ಬಾರ್ & ಬೆಂಚ್)