Home ಟಾಪ್ ಸುದ್ದಿಗಳು ಮುಂಬೈ: ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆ

ಮುಂಬೈ: ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆ

ಮುಂಬೈ: ಮಾಜಿ ಸಚಿವ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ನಾಯಕ ಬಾಬಾ ಸಿದ್ದೀಕಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈಯ್ದಿದ್ದಾರೆ.

ಇಲ್ಲಿನ ಉಪನಗರ ಬಾಂದ್ರಾ ಪ್ರದೇಶದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಬಾಬಾ ಸಿದ್ದಿಕಿ ಅವರ ಎದೆ ಮತ್ತು ಹೊಟ್ಟೆಗೆ ಗುಂಡು ತಗುಲಿದ್ದು, ಅವರನ್ನು‌ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ನಿರ್ಮಲ್ ನಗರದ ಕೋಲ್ಗೆಟ್ ಮೈದಾನದ ಬಳಿಯಿರುವ ಅವರ ಪುತ್ರ ಮತ್ತು ಶಾಸಕ ಜೀಶನ್ ಸಿದ್ದಿಕಿ ಕಚೇರಿಯ ಹೊರಗೆ ಗುಂಡಿನ ದಾಳಿ ನಡೆದಿದೆ. ಎರಡರಿಂದ ಮೂರು ಸುತ್ತು ಗುಂಡು ಹಾರಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಸಿದ್ದಿಕಿ ಇತ್ತೀಚೆಗೆ ಕಾಂಗ್ರೆಸ್‌ ಬಿಟ್ಟು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರಿದ್ದರು. ಇವರು ಮೂರು ಬಾರಿ ಶಾಸಕರಾಗಿದ್ದರು.

ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ‌ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಬಾಬಾ ಸಿದ್ದೀಕಿ ಹತ್ಯೆ ಚುನಾವಣೆಯ ಹೊಸ್ತಿನಲ್ಲಿರುವ ಮಹಾರಾಷ್ಟ್ರ ರಾಜಕೀಯದಲ್ಲಿ‌ ಸಂಚಲನ ಸೃಷ್ಟಿಸಿದೆ. ಬಾಬಾ ಸಿದ್ದಿಕಿ ಹತ್ಯೆ ಸುದ್ದಿ ತಿಳಿದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ಲೀಲಾವತಿ ಆಸ್ಪತ್ರೆಗೆ ದೌಡಾಯಿಸಿ ಬಂದಿದ್ದಾರೆ.

ಬಾಬಾ ಸಿದ್ದಿಕಿ ಅವರನ್ನು ಹತ್ಯೆ ಮಾಡಿದವರ ಮೇಲೆ‌ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿದರು

ಸುಪಾರಿ ಹಂತಕರಿಂದ ಕೊಲೆ ನಡೆದಿದೆ ಎಂಬ ಶಂಕೆ ಇದೆ, ಸುಪಾರಿ ಕೊಟ್ಟವರು ಯಾರೆಂದು ಇನ್ನಷ್ಟೆ ತನಿಖೆಯಿಂದ ತಿಳಿಯಬೇಕಾಗಿದೆ

ಲೀಲಾವತಿ‌ ಆಸ್ಪತ್ರೆ ಬಳಿ‌ ಬಾಬಾ ಸಿದ್ದಿಕಿ ಬೆಂಬಲಿಗರು ಮತ್ತು ಎನ್‌ಸಿಪಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ‌ ಸೇರಿದ್ದಾರೆ.

ಎನ್‌ಸಿಪಿ, ಶಿವಸೇನೆ ಕಾಂಗ್ರೆಸ್ ನಾಯಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

Join Whatsapp
Exit mobile version