ಚೆನ್ನೈ: ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದ ವಿದ್ಯಾಸಾಗರ್ ಅವರು ಇಂದು ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಿದ್ಯಾಸಾಗರ್ ಈ ವರ್ಷದ ಆರಂಭದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಬಳಿಕ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ತುತ್ತಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೀನಾ ಪತಿ ವಿದ್ಯಾಸಾಗರ್ ನಿಧನರಾಗಿದ್ದಾರೆ.
ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಆಘಾತವಾಗಿದೆ, ನಮ್ಮ ಕುಟುಂಬವು ಮೀನಾ ಮತ್ತು ಅವರ ಕುಟುಂಬದ ಹತ್ತಿರದ ಮತ್ತು ಪ್ರೀತಿಪಾತ್ರರಿಗೆ ಹೃತ್ಪೂರ್ವಕ ಸಂತಾಪ ಸೂಚಿಸುತ್ತದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ, ನಿರ್ದೇಶಕ ಶರತ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ನಟಿಸಿರುವ ಮೀನಾ, 2009 ರಲ್ಲಿ ವಿದ್ಯಾಸಾಗರ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ 11 ವರ್ಷದ ಮಗಳು ನೈನಿಕಾ ಇದ್ದಾಳೆ.