ಮುಲ್ಕಿ: ಇಲ್ಲಿನ ಕಾರ್ನಾಡು ಗಾಂಧಿ ಮೈದಾನ ಬಳಿ ಇರುವ ಮೊಬಿಕಾಂ ಮೊಬೈಲ್ ಅಂಗಡಿ ಕಳವಿಗೆ ಯತ್ನಿಸಿರುವ ಘಟನೆ ಶನಿವಾರ ಮುಂಜಾವ 3ರ ವೇಳೆ ನಡೆದಿದೆ. ಕಳ್ಳ ಮೊಬೈಲ್ ಅಂಗಡಿಯ ಶಟರ್ ಲಾಕ್ ಅನ್ನು ಹೊಡೆದು ಕಳವಿಗೆ ಯತ್ನಿಸಿದ್ದಾನೆ. ಆದರೆ ಶಟರ್ ನ ಸೆಂಟರ್ ಲಾಕ್ ಮುರಿಯಲು ಅಸಾಧ್ಯವಾದದ್ದರಿಂದ ಕಳವಿಗಾಗಿ ತಂದಿದ್ದ ಸಲಕರಣೆಯನ್ನು ಸ್ಥಳದಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುಮಾರು ಅರ್ಧ ತಾಸಿಗಿಂತಲೂ ಹೆಚ್ಚು ಸಮಯ ಕಳವಿಗೆ ವಿಫಲ ಯತ್ನ ನಡೆಸಿದ್ದಾನೆ ಎಂದು ಅಂಗಡಿ ಮಾಲೀಕ ಇಮ್ರಾನ್ ತಿಳಿಸಿದ್ದಾರೆ. ಮುಲ್ಕಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.