➤ ಮುಂದುವರಿದ ಯೋಗಿಯ ಮೊಘಲ್ ದ್ವೇಷ
ಲಖನೌ : “ಮೊಘಲರು ನಮ್ಮ ಹೀರೋಗಳು ಹೇಗಾಗುತ್ತಾರೆ?’’ ಎಂದು ಪ್ರಶ್ನಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆಗ್ರಾದ ‘ಮೊಘಲ್ ಮ್ಯೂಸಿಯಂ’ ಹೆಸರನ್ನು ‘ಛತ್ರಪತಿ ಶಿವಾಜಿ ಮಹಾರಾಜ್’ ಎಂದು ಬದಲಾಯಿಸಲು ನಿರ್ಧರಿಸಿದ್ದಾರೆ. ಆಗ್ರಾ ವಲಯದ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಮೊಘಲ್ ಮ್ಯೂಸಿಯಂಗೆ 2016ರಲ್ಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶಂಕು ಸ್ಥಾಪನೆ ಮಾಡಿದ್ದರು. ಆಗ್ರಾ ಹೆರಿಟೇಜ್ ಸೆಂಟರ್, ತಾಜ್ ಓರಿಯಂಟೇಶನ್ ಸೆಂಟರ್ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದ್ದರು.
ತಾಜ್ ಮಹಲ್ ನ ಪೂರ್ವ ಗೇಟ್ ಬಳಿ ಆರು ಎಕರೆಯಲ್ಲಿ ಮ್ಯೂಸಿಯಂ ನಿರ್ಮಾಣದ ಪ್ರಸ್ತಾಪವಿತ್ತು. ಪ್ರವಾಸಿಗರಿಗೆ ಮೊಘಲರ ಕಾಲದ ಶಸ್ತ್ರಾಸ್ತ್ರಗಳು, ಸಾಂಸ್ಕೃತಿಕ ಪರಿಕರಗಳು ಮತ್ತು ವಸ್ತ್ರಗಳು ಸೇರಿದಂತೆ ಹಲವು ಪಾರಂಪರಿಕ ವಸ್ತುಗಳನ್ನು ಪ್ರದರ್ಶಿಸುವುದು ಮ್ಯೂಸಿಯಂ ಸ್ಥಾಪನೆಯ ಉದ್ದೇಶವಾಗಿತ್ತು.
ಮ್ಯೂಸಿಯಂ ಸ್ಥಾಪನೆಯ ಉದ್ದೇಶ ಹೀಗಿರುವಾಗ, ಹೆಸರು ಬದಲಾವಣೆಯಿಂದ ಅದರ ಮೇಲೆ ಯಾವ ಪರಿಣಾಮ ಉಂಟಾಗಬಹುದು ಎಂಬುದರ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಹೆಸರು ಬದಲಾವಣೆಯ ಜೊತೆಗೆ ಬಹುಶಃ ಮ್ಯೂಸಿಯಂನ ಉದ್ದೇಶವೂ ಬದಲಾವಣೆಯಾಗಬಹುದು ಎನ್ನಲಾಗುತ್ತಿದೆ.