ಅನಂತ್ ನಾಗ್: ದುಬೈಯಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತದ ವಿರುದ್ಧ ಜಯಗಳಿಸಿದ ಪಾಕಿಸ್ತಾನ ತಂಡವನ್ನು ಬೆಂಬಲಿಸಿದ ವಾಟ್ಸಾಪ್ ಸ್ಟೇಟಸ್ ಹಾಕಿದ ಆರೋಪದಲ್ಲಿ ಆಗ್ರಾ ಪೊಲೀಸರಿಂದ ಬಂಧಿತರಾದ ಕಾಶ್ಮೀರ ವಿದ್ಯಾರ್ಥಿಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಪಿಡಿಪಿ ಅಧ್ಯಕ್ಷೆ ಮುಫ್ತಿ ಮೆಹಬೂಬ ಗುರುವಾರ ಆಗ್ರಹಿಸಿದ್ದಾರೆ.
ಉತ್ತರಪ್ರದೇಶದ ಆಗ್ರಾದಲ್ಲಿರುವ ರಾಜಾ ಬಲ್ವಂತ್ ಸಿಂಗ್ ಮ್ಯಾನೇಜ್ಮೆಂಟ್ ಟೆಕ್ನಿಕಲ್ ಕಾಲೇಜಿನ ವಿದ್ಯಾರ್ಥಿಗಳ ವಿರುದ್ಧ ಜಗದೀಶ ಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದ್ದು, ಬುಧವಾರ ಆರೋಪಿತ ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ರಾಜ್ಯದ ಒಳಗೆ ಮತ್ತು ಹೊರಗಡೆ ದೌರ್ಜನ್ಯ ಖಂಡನೀಯ. ಬಿಜೆಪಿಯ ನಕಲಿ ದೇಶಪ್ರೇಮವು ಭಾರತದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಬಂಧಿತ ಕಾಶ್ಮೀರ ವಿದ್ಯಾರ್ಥಿಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ಮಾಧ್ಯಮದಲ್ಲಿ ಪ್ರಕಟನೆಗೊಂಡ ಸುದ್ದಿಯನ್ನು ಟ್ವೀಟ್ ಮೂಲಕ ಟ್ಯಾಗ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಮುಫ್ತಿ, ದೇಶದ ಯಾವುದೇ ಕ್ಯಾಂಪಸ್ ನಲ್ಲಿ ದೇಶದ್ರೋಹಿ ಘೋಷಣೆಯನ್ನು ಕೂಗಲಾಗುವುದಿಲ್ಲ ಎಂದು ತಿಳಿಸಿದರು.