ಬೆಂಗಳೂರು: ಮೈಸೂರು ತಂಬಾಕು ಕಂಪೆನಿ ಅಧ್ಯಕ್ಷರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಬೆಂಗಳೂರಿನ ಕಾಡುಗೋಡಿಯ ಎಂಟಿಸಿ (ಮೈಸೂರು ಟೊಬ್ಯಾಕೋ ಕಂಪೆನಿ)ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರು ತಂಬಾಕು ಕಂಪನಿ ಲಿಮಿಟೆಡ್, ಬೆಂಗಳೂರು ಕಂಪನಿಗಳ ಕಾಯಿದೆ 1956 ರ ಅಡಿಯಲ್ಲಿ ವ್ಯವಹರಿಸುವ ಉದ್ದೇಶಕ್ಕಾಗಿ ನೋಂದಾಯಿಸಲಾದ ಸರ್ಕಾರಿ ಕಂಪನಿಯಾಗಿದೆ. ರಾಜ್ಯದ ರೈತರ ಅನುಕೂಲಕ್ಕಾಗಿ 1936 ಮೈಸೂರು ಮಹಾರಾಜರ ಕಾಲದಲ್ಲಿ ರಾಜ್ಯದಲ್ಲಿ ಎಂಟಿಸಿ ರಚನೆಯಾಗಿತ್ತು.
ಮೈಸೂರು ಮಹಾರಾಜರು ಹೊಸಕೋಟೆ ತಾಲೂಕಿನ ಕಾಡುಗೋಡಿ ಗ್ರಾಮದ ಸರ್ವೆ ನಂ.218 ರಲ್ಲಿ 1938 ರಲ್ಲಿ 1.15 ಎಕರೆಯನ್ನು ಪಿ ಆ್ಯಂಡ್ ಟಿ ಇಲಾಖೆಗೆ ಮಾರಾಟ ಹಾಗೂ 5 ಎಕರೆಯನ್ನು ಕರ್ನಾಟಕ ಸಹಕಾರಿ ಎಣ್ಣೆ ಬೀಜಗಳ ಬೆಳೆಗಾರರ ಒಕ್ಕೂಟಕ್ಕೆ ಮತ್ತು ಉಳಿದ 11.83 ಎಕರೆಗಳನ್ನು ಕಾಡುಗೋಡಿ ಗ್ರಾಮ ಹೊಸಕೋಟೆ ತಾಲ್ಲೂಕಿನಲ್ಲಿ ಎಂಟಿಸಿಗೆ ಬಿಟ್ಟುಕೊಟ್ಟಿದ್ದರು. ಎಂಟಿಸಿಯು ತಂಬಾಕು ಶೇಖರಣೆಗಾಗಿ ಗೋಡೌನ್ ಗಳನ್ನು ನಿರ್ಮಿಸಿದ್ದು,ಇದೀಗ ಗೋಡೌನ್ ಗಳು ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ಎಂಟಿಸಿಯ ಈ ಜಮೀನಿನಲ್ಲಿ ಗೋಡೌನ್ ನಿರ್ಮಿಸುವ ಹಾಗೂ ಶಿಥಿಲಾವಸ್ಥೆಯಲ್ಲಿರುವ ಗೋಡೌನ್ ಗಳ ಬಗ್ಗೆ ಅಧಿಕಾರಿಗಳು ಹಾಗೂ ಇಂಜಿನಿಯರ್ಗಳ ಜೊತೆ ಬಿಸಿಪಿ ಚರ್ಚಿಸಿದರು.
ಇನ್ನು ಕರ್ನಾಟಕ ಸಹಕಾರಿ ಎಣ್ಣೆ ಬೀಜಗಳ ಬೆಳೆಗಾರರ ಒಕ್ಕೂಟದ ವಿಸ್ತೀರ್ಣಕ್ಕೆ ಜಾಗದ ಅವಶ್ಯಕತೆಯಿರುವುದರಿಂದ ಈ ಎಂಟಿಸಿಯ ಪಕ್ಕದಲ್ಲಿನ ಸ್ವಲ್ಪ ಜಾಗವನ್ನು ನೀಡುವಂತೆ ಎಣ್ಣೆಬೀಜಗಳ ಬೆಳೆಗಾರರ ಒಕ್ಕೂಟದವರು ಎಂಟಿಸಿ ಅಧ್ಯಕ್ಷರಾಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲರಿಗೆ ಮನವಿ ಮಾಡಿದ್ದು,ಈಬಗ್ಗೆಯೂ ಸಚಿವರು ಪರಿಶೀಲಿಸಿ ಇದರಿಂದಾಗಬಹುದಾದ ಒಳಿತು ಕೆಡಕು ಲಾಭನಷ್ಟಗಳನ್ನು ಚರ್ಚಿಸಿ ಪರಿಶೀಲಿಸಿ ತಮ್ಮ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.