Home ಕರಾವಳಿ ಎಂಆರ್ ಪಿಎಲ್ ಸ್ಥಳೀಯ ಗುತ್ತಿಗೆ ಕಾರ್ಮಿಕ ಕೋಟ್ಯಾನ್ ಸಾವು: ಪಾರದರ್ಶಕ ತನಿಖೆ ಡಿವೈಎಫ್ ಐ ಆಗ್ರಹ

ಎಂಆರ್ ಪಿಎಲ್ ಸ್ಥಳೀಯ ಗುತ್ತಿಗೆ ಕಾರ್ಮಿಕ ಕೋಟ್ಯಾನ್ ಸಾವು: ಪಾರದರ್ಶಕ ತನಿಖೆ ಡಿವೈಎಫ್ ಐ ಆಗ್ರಹ

 ಮಂಗಳೂರು: ಎಂಆರ್ ಪಿಎಲ್ ಕೈಗಾರಿಕಾ ಘಟಕದಲ್ಲಿ ಸ್ಥಳೀಯ ಗುತ್ತಿಗೆ ಕಾರ್ಮಿಕ ಕೇಶವ ಕೋಟ್ಯಾನ್ ಕರ್ತವ್ಯದ ಸಂದರ್ಭ ಕ್ರೇನ್ ಅಪಘಾತದಲ್ಲಿ ಸಾವಿಗೀಡಾಗಿದ್ದು, ಸಾವಿನ ನೈಜ ಕಾರಣವನ್ನು ಕಂಪೆನಿ ಮುಚ್ಚಿಡುತ್ತಿದೆ. ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸುವಲ್ಲಿಯೂ ಎಂಆರ್ ಪಿಎಲ್ ಆಡಳಿತ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಇದು ಖಂಡನೀಯ. ಕೇಶವ ಕೋಟ್ಯಾನ್ ಸಾವಿನ ಕುರಿತು ಪಾರದರ್ಶಕ ತನಿಖೆ ನಡೆಯಬೇಕು ಹಾಗೂ ಕರ್ತವ್ಯದ ವೇಳೆ ಕಂಪೆನಿಯ ನಿರ್ಲಕ್ಷದಿಂದ ಸಾವಿಗೀಡಾದ ಕೇಶವ ಕೋಟ್ಯಾನ್ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ, ಕುಟುಂಬ ಸದಸ್ಯನಿಗೆ ಎಂಅರ್ ಪಿಎಲ್ ನಲ್ಲಿ ಖಾಯಂ ಉದ್ಯೋಗ ಒದಗಿಸಿಕೊಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಕೇಶವ ಕೋಟ್ಯಾನ್ ಕರ್ತವ್ಯ ನಿರತರಾಗಿದ್ದಾಗ ಕ್ರೇನ್ ನ ಭಾರವಾದ ವಸ್ತು ಎದೆ ಹಾಗೂ ಮುಖದ ಭಾಗಕ್ಕೆ ಬಡಿದು ಸಾವಿಗೀಡಾಗಿದ್ದಾರೆ ಎಂಬುದು ಬಹಿರಂಗಗೊಂಡಿರುವ ಮಾಹಿತಿ. ಇದು ಕಂಪೆನಿಯ ಬೇಜವಾಬ್ದಾರಿತನದಿಂದ ನಡೆದ ದುರ್ಘಟನೆ. ಆದರೆ ಕಂಪೆನಿ ಇದನ್ನು ಮುಚ್ಚಿಟ್ಟು ಕೇಶವ ಕೋಟ್ಯಾನ್ ಅವರದ್ದು ಸ್ವಾಭಾವಿಕ ಸಾವು ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಇದು ಆಘಾತಕಾರಿ. ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಯತ್ನ. ಅದಲ್ಲದೆ ಕಂಪೆನಿಯು ಪ್ರಭಾವ ಬಳಸಿ ಸೈಟ್ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳ ಬದಲಿಗೆ ಕಂಪೆನಿಯು ಖಾಸಗಿಯವರಿಂದ ಗುತ್ತಿಗೆ ಆಧಾರದಲ್ಲಿ ತರಿಸಿಕೊಂಡಿರುವ ಕ್ರೇನ್ ನ ಅಪರೇಟರ್ ವಿರುದ್ಧ ದೂರು ದಾಖಲಾಗುವಂತೆ ಮಾಡಿದೆ.  ಖಾಸಗಿ ಉದ್ಯೋಗಿಯಾಗಿರುವ ಬಡಪಾಯಿ ಕ್ರೇನ್ ಅಪರೇಟರ್ ನನ್ನು ಬಲಿಪಶು ಮಾಡಿ ಎಂಆರ್ ಪಿಎಲ್ ಅಧಿಕಾರಿಗಳನ್ನು ರಕ್ಷಿಸುವ ಕುತಂತ್ರ ಮಾಡಲಾಗಿದೆ. ಸ್ವಾಭಾವಿಕ ಸಾವು ಆಗಿದ್ದರೆ ಕ್ರೇನ್ ಆಪರೇಟರ್ ವಿರುದ್ಧ ದೂರು ದಾಖಲಿಸಿರುವುದು ಯಾಕೆ ?  ಕಂಪೆನಿ ತನ್ನ ತಪ್ಪುಗಳನ್ನು ಮರೆಮಾಚಲು ಕೇಶವ ಕೋಟ್ಯಾನ್ ಸಾವಿನ ಘಟನೆಯನ್ನೇ ತಿರುಚುತ್ತಿದೆ.  ಪೋಸ್ಟ್ ಮಾರ್ಟಮ್ ನಡೆಸಲು, ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲು 24 ಗಂಟೆಗೂ ಹೆಚ್ಚು ಅವಧಿ ತೆಗೆದುಕೊಂಡಿರುವುದು ಇದಕ್ಕೆ ಸಾಕ್ಷಿ. ಪ್ರಕರಣ ಮುಚ್ಚಿ ಹಾಕಲು ಒಳಗಿನಿಂದ ನಡೆಯುತ್ತಿರುವ ಪ್ರಯತ್ನಗಳನ್ನು ಈ ಬೆಳವಣಿಗೆಗಳು ಬಯಲಿಗೆಳೆದಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 ಕೇಶವ ಕೋಟ್ಯಾನ್ ಸಾವಿಗೀಡಾಗಿ ಒಂದು ದಿನ ಕಳೆದರೂ ಕಂಪೆನಿಯ ವತಿಯಿಂದ ಸಂತ್ರಸ್ತ ಕುಟುಂಬಕ್ಕೆ ಯಾವುದೇ ಪರಿಹಾರ ಘೋಷಿಸಿಲ್ಲ. ಕೇವಲ ಗುತ್ತಿಗೆದಾರ ಮಾಡಿರುವ ವಿಮೆ, ಹಾಗೂ ವರ್ಕ್ ಮೆನ್ ಕಂಪೊಂಜೇಷನ್ ಕಾಯ್ದೆ ಅಡಿಯಲ್ಲಿ ಸಿಗುವ ಪರಿಹಾರವನ್ನು ಮಾತ್ರ ಬೊಟ್ಟು ಮಾಡುತ್ತಿದೆ. ವರ್ಕ್ ಮೆನ್ ಕಂಪೊಂಜೇಷನ್ ಪ್ರಕಾರ ಕೇಶವ ಕೋಟ್ಯಾನ್ ಕುಟುಂಬಕ್ಕೆ ಸರಿ ಸುಮಾರು ಹತ್ತು ಲಕ್ಷದಷ್ಚು ಪರಿಹಾರ ಮಾತ್ರ ದೊರಕುತ್ತದೆ. ಇದೆಲ್ಲದಕ್ಕೂ ಕಂಪೆನಿಯು ಗುತ್ತಿಗೆದಾರನತ್ತ ಕೈತೋರುತ್ತಿದೆ. ಎಂಆರ್ ಪಿಎಲ್ ನಲ್ಲಿ ಗುತ್ತಿಗೆ ಆಧಾರದ ಉದ್ಯೋಗಿಗಳಿಗೂ, ಖಾಯಂ ಉದ್ಯೋಗಿಗಳಿಗೂ ವೇತನ, ಸವಲತ್ತುಗಳಲ್ಲಿ ಅಗಾಧವಾದ ತಾರತಮ್ಯವಿದೆ. ಸ್ಥಳೀಯರನ್ನು ಕಡಿಮೆ ವೇತನಕ್ಕೆ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತದೆ. 22 ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದರೂ ಕೇಶವ ಕೋಟ್ಯಾನ್ ಉದ್ಯೋಗ ಖಾಯಂ ಆಗದಿರುವುದು ಇದಕ್ಕೊಂದು ನಿದರ್ಶನ.  ತಿಂಗಳುಗಳ ಹಿಂದೆ ಎಂಆರ್ ಪಿಎಲ್ ನ ಖಾಯಂ ಉದ್ಯೋಗಿ ಹರೀಶ್ ಲಾಲ್ ಎಂಬವರು ಕಂಪೆನಿಯ ಒಳಗಡೆ ಸಾವಿಗೀಡಾಗಿದ್ದರು. ಅವರಿಗೆ ಸರಿಸುಮಾರು ಎರಡೂವರೆ ಕೋಟಿ ರೂಪಾಯಿ ಪರಿಹಾರ ಧನ ದೊರಕಿತ್ತು. ಆದರೆ ಅದೇ ರೀತಿ ಕಂಪೆನಿಯ ಒಳಗಡೆ ಕರ್ತವ್ಯ ನಿರತರಾಗಿದ್ದಲೇ ಸಾವಿಗೀಡಾದ 22 ವರ್ಷಗಳಿಂದ ದುಡಿಯುತ್ತಿರುವ ಸ್ಥಳೀಯರಾದ ಗುತ್ತಿಗೆ ಕಾರ್ಮಿಕ  ಕೇಶವ ಕೋಟ್ಯಾನ್ ರಿಗೆ ಕಂಪೆನಿಯ ವತಿಯಿಂದ ಬಿಡಿಗಾಸು ನೀಡಲೂ ಸಿದ್ಧರಿರದಿರುವುದು ಖೇದಕರ. ಸ್ಥಳೀಯರ ಹಾಗೂ ಗುತ್ತಿಗೆ ಉದ್ಯೋಗಿಗಳ ಕುರಿತು ಕಂಪೆನಿಯ ಆಡಳಿತ ಹೊಂದಿರುವ ನಿಕೃಷ್ಟ ಮನೋಭಾವವನ್ನು ಇದು ಎತ್ತಿತೋರಿಸುತ್ತದೆ. ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಸಾಮಾನ್ಯವಾಗಿ ಕಾಣಸಿಗದ ಅಸಹಜ ವಂಚಕ ಗುಣಗಳು ಎಂಆರ್ ಪಿಎಲ್ ಅಳವಡಿಸಿಕೊಂಡಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಒಟ್ಟು ಕೇಶವ ಕೋಟ್ಯಾನ್ ಅಪಘಾತ, ಸಾವು ಪ್ರಕರಣದ ಕುರಿತು ಪಾರದರ್ಶಕ ತನಿಖೆಯ ಅಗತ್ಯವಿದೆ. ಜಿಲ್ಲಾಡಳಿತ ಈ ಕುರಿತು  ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಒಎನ್ ಜಿಸಿ ಯ ವಿಜಿಲೆನ್ಸ್ ಕಮಿಟಿ ಪ್ರತ್ಯೇಕ ತನಿಖೆ ಕೈಗೊಳ್ಳಬೇಕು. ಅಪಘಾತ ಪ್ರಕರಣವನ್ನು ಕುಸಿದು ಬಿದ್ದು ಸ್ವಾಭಾವಿಕ ಸಾವು ಎಂದು ಪ್ರಕಟನೆ ನೀಡಿ ದಾರಿತಪ್ಪಿಸಿದ, ಪ್ರಕರಣವನ್ನು ತಿರುಚಲು ಯತ್ನಿಸುತ್ತಿರುವ ಎಂ ಆರ್ ಪಿ ಎಲ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಕೇಶವ ಕೋಟ್ಯಾನ್ ಸಂತ್ರಸ್ತ ಕುಟುಂಬಕ್ಕೆ ಕಂಪೆನಿಯ ವತಿಯಿಂದ ಒಂದು ಕೋಟಿ ರೂಪಾಯಿ ಪರಿಹಾರ ಧನ ಹಾಗೂ ಅವರ ಕುಟುಂಬಕ್ಕೆ ಒಂದು ಖಾಯಂ ಉದ್ಯೋಗ ಒದಗಿಸಿಕೊಡಬೇಕು ಎಂದು ಎಂದು  ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version