ಲಕ್ನೋ: ಉತ್ತರ ಪ್ರದೇಶದಲ್ಲಿ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತು ಬಿಜೆಪಿ ವಿರುದ್ಧ ತೀವ್ರ ಟೀಕೆಗೆ ಒಳಗಾಗಿವೆ. ಭೋಜ್ ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ವಿಮರ್ಶನಾತ್ಮಕ ಹಾಡಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ.
ಬಿಜೆಪಿ ಸಂಸದ ರವಿ ಕಿಶನ್ ಅವರ ಯೋಗಿ ಮತ್ತು ಬಿಜೆಪಿಯನ್ನು ಹೊಗಳುವ ‘ಯುಪಿ ಮೇ ಸಬ್ಬಾ’ (ಉತ್ತರ ಪ್ರದೇಶದಲ್ಲಿ ಎಲ್ಲವೂ ಇದೆ) ಎಂಬ ಚುನಾವಣಾ ಹಾಡು ಶನಿವಾರ ಬಿಡುಗಡೆಯಾಗಿತ್ತು. ‘ಇದು ಯೋಗಿ ಅವರ ಸರ್ಕಾರ. ಇಲ್ಲಿ ಅಭಿವೃದ್ಧಿ ಇದೆ, ರಸ್ತೆ ಇದೆ, ಅಪರಾಧಿಗಳು ಜೈಲಿನಲ್ಲಿದ್ದಾರೆ, ಕೋವಿಡ್ ಇಲ್ಲ, ಎಲ್ಲೆಡೆ ವಿದ್ಯುತ್ ಇದೆ. ಉತ್ತರ ಪ್ರದೇಶದಲ್ಲಿ ಎಲ್ಲವೂ ಇದೆ’ ಎಂದು ಈ ಹಾಡು ಪ್ರಾರಂಭವಾಗುತ್ತದೆ.
ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಭೋಜ್ ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ “ಕೋವಿಡ್ ಮಹಾಮಾರಿ, ಲಖಿಂಪುರ ಹಿಂಸಾಚಾರ, ಹತ್ರಾಸ್ ಅತ್ಯಾಚಾರ” ಇತ್ಯಾದಿಗಳನ್ನು ಹಾಡಿನ ವಿಷಯಗಳನ್ನಾಗಿ ಮಾಡಿ ‘ಯುಪಿ ಮೇ ಕಾ ಬಾ’ (ಯುಪಿಯಲ್ಲಿ ಏನಿದೆ) ಎಂದು ಪ್ರಾರಂಭಿಸುವ ಹಾಡನ್ನು ಟ್ವಿಟರ್ ಮತ್ತು ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದರು.ಅದು ಶೀಘ್ರದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.