Home ಟಾಪ್ ಸುದ್ದಿಗಳು ಪೊಲೀಸರನ್ನು ಅವಾಚ್ಯವಾಗಿ ಬೈದ ಮೂಡಿಗೆರೆ ಶಾಸಕ: ನನ್ನ ವರ್ತನೆ ನನಗೇ ಬೇಸರ ತರಿಸಿದೆ ಎಂದ ಎಂ.ಪಿ.ಕುಮಾರಸ್ವಾಮಿ

ಪೊಲೀಸರನ್ನು ಅವಾಚ್ಯವಾಗಿ ಬೈದ ಮೂಡಿಗೆರೆ ಶಾಸಕ: ನನ್ನ ವರ್ತನೆ ನನಗೇ ಬೇಸರ ತರಿಸಿದೆ ಎಂದ ಎಂ.ಪಿ.ಕುಮಾರಸ್ವಾಮಿ

ಬೆಂಗಳೂರು; ವಿಧಾನ ಸೌಧದ ಶಾಸಕರ ಭವನ ಬಳಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಕಳೆದ ರಾತ್ರಿ ಪೊಲೀಸ್ ಸಿಬ್ಬಂದಿ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಕಳೆದ ತಡರಾತ್ರಿ ವಿಧಾನ ಸೌಧ ಬಳಿ ರಾತ್ರಿ ಗಸ್ತಿನ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನರಸಿಂಹ ಮೂರ್ತಿ ಮೇಲೆ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.

ಶಾಸಕರ ಭವನದಿಂದ ಶಾಸಕ ಎಂ ಪಿ ಕುಮಾರಸ್ವಾಮಿಯವರು ಕಾರಿನಲ್ಲಿ ನಿನ್ನೆ ಮಧ್ಯರಾತ್ರಿ ಹೊರಬಂದಿದ್ದ ಸಂದರ್ಭದಲ್ಲಿ ಹೊಯ್ಸಳ ವಾಹನ ನಿಂತಿದ್ದು ಈ ಸಮಯದಲ್ಲಿ ಪಾರ್ಕಿಂಗ್ ವಿಚಾರವಾಗಿ ಗಲಾಟೆಯಾಗಿದೆ ಎಂದು ಹೇಳಲಾಗುತ್ತಿದೆ. ರಾತ್ರಿ ಗಸ್ತಿನಲ್ಲಿದ್ದ ಕಾನ್ಸ್ಟೇಬಲ್ ಚಂದ್ರಶೇಖರ್, ಎಚ್ ಪಿ ನರಸಿಂಹಮೂರ್ತಿ ಅವರಿಗೆ ಅವಾಚ್ಯ ಶಬ್ದಗಳಿಂದ ಶಾಸಕರು ನಿಂದಿಸಿದ್ದಾರೆ.

ಹಲ್ಲೆ ಬಗ್ಗೆ ಕಂಟ್ರೋಲ್ ರೂಂಗೆ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಂತೆ ಎಸಿಪಿ ಸ್ಥಳಕ್ಕೆ ಆಗಮಿಸಿದ್ದರು. ಶಾಸಕರನ್ನು ಮತ್ತು ಅಲ್ಲಿರುವ ಪೊಲೀಸ್ ಸಿಬ್ಬಂದಿಯನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದರೂ ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.

ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ, ಕಳೆದ ರಾತ್ರಿ ನಡೆದ ಘಟನೆ ಬಗ್ಗೆ ಮತ್ತು ನನ್ನ ವರ್ತನೆ ಬಗ್ಗೆ ನನಗೇ ಬೇಸರವಿದೆ. ಆ ಪೊಲೀಸ್ ಸಿಬ್ಬಂದಿಗೆ ನಾನು ಶಾಸಕನೆಂಬುದೇ ಗೊತ್ತಿಲ್ಲ. ನನ್ನ ಕಾರು ಹೋಗುವುದಕ್ಕೆ ಮುಕ್ಕಾಲು ಗಂಟೆ ಕಾಲ ಸಿಬ್ಬಂದಿ ಬಿಡಲೇ ಇಲ್ಲ. ಪೊಲೀಸರು ಕಾರು ಅಡ್ಡಹಾಕಿಕೊಂಡಿದ್ದರು. ಹೀಗಾಗಿ ನಾನೇ ಸ್ಥಳಕ್ಕೆ ಹೋಗಿ ಮಾತನಾಡಿದ್ದೆ. ನಿನಗೆ ಬುದ್ಧಿ ಇಲ್ಲವಾ? ಕಾರು ಹೋಗುವುದಕ್ಕೆ ಬಿಡಲ್ವಾ? ಎಂದು ಪ್ರಶ್ನಿಸಿದ್ದೆ. ಈ ವೇಳೆ ಸಿಬ್ಬಂದಿ ಪೆದ್ದ ಪೆದ್ದನಾಗಿ ಮಾತನಾಡಿದ್ದರು. ನಾನು ಶಾಸಕನೇ ಅಲ್ಲ ಎನ್ನುವಂತೆ ಮಾತನಾಡಿದ್ದರು. ಈ ವೇಳೆ ಸಿಟ್ಟಾಗಿ ನಾನು ಕೂಡ ಮಾತನಾಡಿದ್ದೇನೆ. ಬಳಿಕ ಘಟನಾ ಸ್ಥಳಕ್ಕೆ ಎಸಿಪಿ ಆಗಮಿಸಿ ಪೊಲೀಸ್ ಸಿಬ್ಬಂದಿಗೆ ಬುದ್ಧಿ ಹೇಳಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ತಿಳಿಸಿದರು.

Join Whatsapp
Exit mobile version