ಭೋಪಾಲ್: ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಹಿಂದುತ್ವವಾದಿಗಳ ಗುಂಪೊಂದು ಸ್ಫೋಟಕಗಳನ್ನು ಬಳಸಿ ದರ್ಗಾವನ್ನು ಧ್ವಂಸಗೊಳಿಸಿದೆ. ಈ ಘಟನೆಯಿಂದಾಗಿ ಹಝರತ್ ಭೇದಾ ಫೀರ್ ದರ್ಗಾ ಷರೀಫ್ ಭಾಗಶಃ ಹಾನಿಗೊಳಗಾಗಿದೆ.
ಮಾತ್ರವಲ್ಲ ದರ್ಗಾದ ಉಸ್ತುವಾರಿ ಖಾದಿಮ್ ನೂರ್ ಸಾಬ್ ಮತ್ತು ಯಾತ್ರಾರ್ಥಿಗಳನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಥಳಿಸಲಾಯಿತು.
ದರ್ಗಾ ಮರು ನಿರ್ಮಾಣಕ್ಕೆ ಮುಂದಾದರೆ ಸ್ಥಳೀಯ ಮುಸ್ಲಿಮರನ್ನು ಹತ್ಯೆ ನಡೆಸುವ ಬೆದರಿಕೆಯನ್ನು ದುಷ್ಕರ್ಮಿಗಳು ಒಡ್ಡಿದ್ದಾರೆ. ಹಿಂದೂಗಳನ್ನು ದರ್ಗಾದ ಮೂಲಕ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳಿಸುವ ಆರೋಪದ ಹಿನ್ನೆಲೆಯಲ್ಲಿ ದರ್ಗಾವನ್ನು ಧ್ವಂಸಗೈದಿರುವುದಾಗಿ ಅವರು ತಿಳಿಸಿದ್ದಾರೆ. ಅದೇ ರೀತಿ ಮುಸ್ಲಿಮರು ಹಿಂದೂಗಳ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದರೆ ಅವರನ್ನು ಗುರಿಯಾಗಿಸುತ್ತೇವೆ ಎಂದು ಕರಪತ್ರಗಳನ್ನು ಮುದ್ರಿಸಿ ಹಂಚಲಾಗಿದೆ.
ದರ್ಗಾದ ಉಸ್ತುವಾರಿ ನೂರ್ ಬಾಬಾ ಅವರ ದೂರಿನನ್ವಯ ಸುಮಾರು 24 ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆಕ್ಷನ್ 147, 148, 149, 295, 323 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಸೂರಜ್ ವರ್ಮಾ ತಿಳಿಸಿದ್ದಾರೆ.