ಬೆಂಗಳೂರು: ಆಧಾರ್ ವ್ಯವಸ್ಥೆಯಿಂದ ಸಂಗ್ರಹಿಸಿರುವ ದತ್ತಾಂಶ ನಿರ್ವಹಣೆ ಗುತ್ತಿಗೆಯನ್ನು ಅಮೆರಿಕ ಸೇರಿ 4 ವಿದೇಶಿ ಕಂಪನಿಗಳಿಗೆ ನೀಡಿರುವ ಬಗೆಗಿನ ಆಕ್ಷೇಪಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಿ ಎಂದು ಹೈಕೋರ್ಟ್ ಅರ್ಜಿದಾರರಿಗೆ ಸಲಹೆ ನೀಡಿದೆ.
ಈ ಕುರಿತು ಥಣಿಸಂದ್ರ ನಿವಾಸಿ ಮ್ಯಾಥ್ಯೂ ಥಾಮಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಈ ಕುರಿತು ಸುಪ್ರಿಂ ಕೋರ್ಟ್ ವಿಚಾರಣೆ ನಡೆಸುವುದೇ ಸೂಕ್ತ ಎಂದಿತು. ಈ ಸಲಹೆಯನ್ನು ಸ್ವೀಕರಿಸಿದ ಅರ್ಜಿದಾರರು, ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರು.
ಆಧಾರ್ ಬಯೊ ಮೆಟ್ರಿಕ್ ಮತ್ತು ಆಧಾರ್ ಮೂಲಕ ಸಂಗ್ರಹಿಸಲಾದ ದತ್ತಾಂಶಗಳ ನಿರ್ವಹಣೆ ಗುತ್ತಿಗೆಯನ್ನು 4 ವಿದೇಶಿ ಕಂಪನಿಗಳಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಅಮೆರಿಕದ ಕಂಪನಿಯು ಅಲ್ಲಿನ ಎಫ್ ಬಿಐ ಮತ್ತು ಕೇಂದ್ರ ಗುಪ್ತಚರ ಏಜೆನ್ಸಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ, ಆಧಾರ್ ದತ್ತಾಂಶ ಈ ಎಲ್ಲಾ ಕಂಪನಿಗಳಿಗೆ ಸುಲಭವಾಗಿ ಲಭ್ಯವಾಗುತ್ತದೆ ಎಂದು ಅರ್ಜಿದಾರರರು ಆರೋಪಿಸಿದ್ದರು.