Home ಟಾಪ್ ಸುದ್ದಿಗಳು ಎಂಟು ವರ್ಷದ ಮಗನ ಕತ್ತು ಸೀಳಿ ಕೊಲೆಗೈದ ತಾಯಿ

ಎಂಟು ವರ್ಷದ ಮಗನ ಕತ್ತು ಸೀಳಿ ಕೊಲೆಗೈದ ತಾಯಿ

ಜೈಪುರ: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು 8 ವರ್ಷದ ಮಗನ ಕತ್ತನ್ನು ಚಾಕುವಿನಿಂದ ಸೀಳಿ ಹತ್ಯೆಗೈದಿರುವ ಘಟನೆ  ಜಲಾವರ್ ಜಿಲ್ಲೆಯ ಸುನೆಲ್ ಪಟ್ಟಣದಲ್ಲಿ ನಡೆದಿದೆ.

ಪುತ್ರ ವಿಜಯ್ ಕುಮಾರ್ ಗುರ್ಜರ್ ನನ್ನು ತಾಯಿ ಮಮತಾ ಗುರ್ಜರ್ (32) ಕೊಲೆ ಮಾಡಿದ್ದಾಳೆ. ಪತಿಯಿಂದ ಪ್ರತ್ಯೇಕವಾಗಿ ಕಳೆದ ಆರು ವರ್ಷಗಳಿಂದ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು.

ಕಳೆದ ಏ.16ರ ರಾತ್ರಿ ತಂದೆ ಮತ್ತು ಸಹೋದರ ಮನೆಯ ಒಳಗಡೆ ಮಲಗಿದ್ದಾಗ, ಹೊರಗೆ ಜಗುಲಿಯ ಮೇಲೆ ಮಲಗಿದ್ದ ಬಾಲಕನನ್ನು ಕೋಣೆಯೊಂದಕ್ಕೆ ಕರೆದೊಯ್ದು ಚಾಕುವಿನಿಂದ ಕತ್ತು ಸೀಳಿ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ತಂದೆ ಮತ್ತು ಸಹೋದರ ಬೆಳಿಗ್ಗೆ ನಿದ್ದೆಯಿಂದ ಎಚ್ಚರಗೊಂಡಾಗ ಬಾಲಕ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಲಕನ ತಾಯಿಯ ಚಿಕ್ಕಪ್ಪ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಮಮತಾ ಗುರ್ಜಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಬಾಲಕನ ತಾಯಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version