ಬಾಗಲಕೋಟೆ: ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಾವಿಯಲ್ಲಿ ಬಿದ್ದ ಮೂವರು ಪುಟಾಣಿ ಮಕ್ಕಳು ಸಾವನ್ನಪ್ಪಿರುವಂತಹ ದಾರುಣ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಬಳಿ ನಡೆದಿದೆ.
ಶ್ರೀಶೈಲ್(5), ಶ್ರಾವಣಿ(3) ಹಾಗೂ 17 ದಿನದ ಸೌಜನ್ಯಾ ಮೃತ ಮಕ್ಕಳು. ಬಾವಿಗೆ ಹಾರಿದ್ದ ಪತ್ನಿ ಸಂಗೀತಾಳನ್ನು ಪತಿ ಹನುಮಂತ ರಕ್ಷಿಸಿದ್ದು, ಮಕ್ಕಳ ರಕ್ಷಣೆಗೆ ತಂದೆ ಎಷ್ಟೇ ಹೋರಾಡಿದರೂ ಬದುಕಿಸಲು ಸಾಧ್ಯವಾಗಿಲ್ಲ.
3ನೇ ಮಗು ಗಂಡಾಗುತ್ತೆಂಬ ಆಸೆ ಇಟ್ಟುಕೊಂಡಿದ್ದ ಸಂಗೀತಾ ಗುಡೆಪ್ಪನವರ, ಆದರೆ ಕಳೆದ 17 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಇದರಿಂದ ನೊಂದು ಹೊಲದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಕ್ಕಳನ್ನು ಬಾವಿಗೆ ತಳ್ಳಿ ಕೊಂದಿದ್ದಕ್ಕೆ ಸಂಗೀತಾ ವಿರುದ್ಧ ಜಮಖಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.