ವಿಜಯಪುರ: ಮಸೀದಿಗಳ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಅಪನಂಬಿಕೆಯನ್ನು ಹೋಗಲಾಡಿಸಿ, ಹಿಂದು–ಮುಸ್ಲಿಂ ಧರ್ಮೀಯರ ನಡುವೆ ಪರಸ್ಪರ ನಂಬಿಕೆ ಮೂಡಿಸುವ ಸಲುವಾಗಿ ವಿಜಯಪುರದ ‘ಅಲ್ ಅಕ್ಸಾ’ ಮಸೀದಿಯಲ್ಲಿ ಹಿಂದೂಗಳಿಗೆ ಪ್ರಥಮ ಬಾರಿಗೆ ‘ಮಸೀದಿ ದರ್ಶನ’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.
ಇಲ್ಲಿನ ಮನಗೂಳಿ ರಸ್ತೆಯ ಕೀರ್ತಿನಗರದ ಅಲ್ ಅಕ್ಸಾ ಉರ್ಫ್ ಮಸ್ಜಿದ್ ಎ ಮನ್ ಖಾದರಿ ವೆಲ್ ಫೇರ್ ಸೊಸೈಟಿಯು ಡಿಸೆಂಬರ್ 11 ರಂದು ಸಂಜೆ 5ರಿಂದ 6ರ ವರೆಗೆ ‘ಬನ್ನಿರಿ ಪರಸ್ಪರ ಅರಿಯೋಣ, ಧಾರ್ಮಿಕ ಸೌಹಾರ್ದತೆ ಬೆಳೆಸೋಣ’ ಎಂಬ ಆಶಯದೊಂದಿಗೆ ಮಸೀದಿ ದರ್ಶನ ಏರ್ಪಡಿಸಿದ್ದು, ಈಗಾಗಲೇ 200 ಜನರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.
‘ಮಸೀದಿಗಳೆಂದರೆ ಭಯೋತ್ಪಾದನೆ ಬೋಧಿಸುವ ಸ್ಥಳ, ಉಗ್ರರನ್ನು ಸೃಷ್ಟಿಸುವ ತಾಣ ಎಂದು ದೇಶದಲ್ಲಿ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಲಾಗಿದೆ. ಆದರೆ, ಮಸೀದಿಗಳಲ್ಲಿ ಅಂತಹ ಯಾವುದೇ ಉಗ್ರಗಾಮಿ ಚಟುವಟಿಕೆ ನಡೆಯುತ್ತಿಲ್ಲ ಅಥವಾ ಅನ್ಯ ಧರ್ಮಿಯರ ಬಗ್ಗೆ ಯಾವುದೇ ವಿಷ ಬೀಜ ಬಿತ್ತುತ್ತಿಲ್ಲ ಎಂಬುದನ್ನು ಸಾರಿ ಹೇಳುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಲ್ ಅಕ್ಸಾ ಉರ್ಫ್ ಮಸ್ಜಿದ್ ಎ ಮನ್ ಖಾದರಿ ವೆಲ್ ಫೇರ್ ಸೊಸೈಟಿ ಅಧ್ಯಕ್ಷ ಎಸ್.ಎಂ. ಪಾಟೀಲ ಗಣಿಹಾರ ಹೇಳಿದ್ದಾರೆ.
ಮಸೀದಿ ದರ್ಶನಕ್ಕೆ ಬರುವ ಅತಿಥಿಗಳಿಗೆ ಧಾರ್ಮಿಕ ಅರಿವು ಮೂಡಿಸುವ ಪುಸ್ತಕಗಳನ್ನು ವಿತರಿಸಲಾಗುವುದು, ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಅಲ್ ಅಕ್ಸಾ ಉರ್ಫ್ ಮಸ್ಜಿದ್ ಎ ಮನ್ ಖಾದರಿ ವೆಲ್ ಫೇರ್ ಸೊಸೈಟಿ ನಿರ್ದೇಶಕ ಸಿಕಂದರ್ ಶೇಖ್ ತಿಳಿಸಿದ್ದಾರೆ.