ನವದೆಹಲಿ ಜುಲೈ 31: ಮುಸ್ಲಿಮ್ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಲು ಸರ್ಕಾರದಿಂದ ನಿಯೋಜಿಸಲ್ಪಟ್ಟ ಡಾ. ರಾಜೇಂದ್ರ ಸಾಚಾರ್ ಸಮಿತಿ ವರದಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಸನಾತನ ವೈದಿಕ ಧರ್ಮದ ಆರು ಅನುಯಾಯಿಗಳು ಹಿಂದುಗಳ ಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಮ್ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆಯೆಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು 2005 ರಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ನಡೆಸಲು ಸಮಿತಿ ರಚಿಸಲು ಅಧಿಸೂಚನೆಯನ್ನು ಹೊರಡಿಸಿದ್ದರು. ಡಾ. ರಾಜೇಂದ್ರ ಸಿಂಗ್ ಸಾಚಾರ್ ಅವರ ಮೇಲ್ವಿಚಾರಣೆಯಲ್ಲಿ ಉನ್ನತ ಸಮಿತಿ ರಚಿಸಿದ ಸರ್ಕಾರ ಮುಸ್ಲಿಮರ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕೋರಿತ್ತು. ಈ ಸಮಿತಿಯು 2006 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ಅಧಿಸೂಚನೆಯನ್ನು ಪ್ರಶ್ನಿಸಿ ವಕೀಲರಾದ ವಿಷ್ಣು ಶಂಕರ್ ಜೈನ್ ಅವರ ಮೂಲಕ ಸುಪ್ರೀಮ್ ಕೊರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಸ್ಲಿಮ್ ಸಮುದಾಯದ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಶಿಫಾರಸು ಮಾಡಿರುವ ಸಾಚಾರ್ ಸಮಿತಿಯ ವರದಿಯನ್ನು ತಿರಸ್ಕರಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಈ ಸಮಿತಿಯು ಯಾವುದೇ ಮಂತ್ರಿಮಂಡಲದ ಸಭೆಯಲ್ಲಿ ನಿರ್ಧಾರ ಆಗದ ಕಾರಣ ಇದು ಕಾನೂನುಬಾಹಿರ ಮತ್ತು ಅಸಂವಿಧಾನಿಕವೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಮಾತ್ರವಲ್ಲ ಡಾ. ಮನಮೋಹನ್ ಸಿಂಗ್ ಸ್ವ-ಇಚ್ಛೆಯಿಂದ ನೇಮಕ ಮಾಡಿರುವ ಈ ಸಮಿತಿಯು ಭಾರತದ ಸಂವಿಧಾನದ 77 ನೇ ವಿಧಿಯನ್ನು ಉಲ್ಲಂಘಿಸಿದೆಯೆಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಸಾಮಾಜಿಕ, ಅರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ತನಿಖೆ ಮಾಡಲು ಆಯೋಗವನ್ನು ನೇಮಿಸುವ ಅಧಿಕಾರವು ಭಾರತದ ಸಂವಿಧಾನದ 340 ನೇ ವಿಧಿಯನ್ವಯ ಭಾರತದ ರಾಷ್ಟ್ರಪತಿಯವರಿಗೆ ಮಾತ್ರ ನೀಡಲಾಗಿದೆಯೆಂದು ಅವರು ವಾದಿಸಿದ್ದರೆ. ಸಂವಿಧಾನದ ಕಲಮ್ 14 ಮತ್ತು 15 ರ ಅಡಿಯಲ್ಲಿ ಯಾವುದೇ ಧಾರ್ಮಿಕ ಸಮುದಾಯವನ್ನು ಪ್ರತ್ಯೇಕ ಪರಿಗಣಿಸಿ ಆ ಸಮುದಾಯದ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಲು ಯಾವುದೇ ಆಯೋಗ ಅಥವಾ ಸಮಿತಿಯನ್ನು ರಚಿಸುವುದು ಸಮಂಜಸವಲ್ಲವೆಂದು ಅದು ವಾದಿಸಿದೆ.