Home ಟಾಪ್ ಸುದ್ದಿಗಳು ಸುಡಾನ್‌: ಭಾರೀ ಮಳೆಗೆ ಅಣೆಕಟ್ಟು ಕುಸಿದು 30ಕ್ಕಿಂತಲೂ ಹೆಚ್ಚು ಸಾವು

ಸುಡಾನ್‌: ಭಾರೀ ಮಳೆಗೆ ಅಣೆಕಟ್ಟು ಕುಸಿದು 30ಕ್ಕಿಂತಲೂ ಹೆಚ್ಚು ಸಾವು

ಖಾರ್ಟೂಮ್: ಸುಡಾನ್‌ನ ಪೂರ್ವದಲ್ಲಿರುವ ಅರ್ಬಾಟ್ ಅಣೆಕಟ್ಟು ಕುಸಿದು 30ಕ್ಕಿಂತಲೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಹಲವು ಮನೆಗಳು ಜಲಾವೃತಗೊಂಡಿವೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ.

ಕೆಂಪು ಸಮುದ್ರದಲ್ಲಿರುವ ಸುಡಾನ್ ಬಂದರಿನ ಉತ್ತರದಲ್ಲಿರುವ ಅಣೆಕಟ್ಟು ರವಿವಾರ ಕುಸಿದಿತ್ತು. ಇದುವರೆಗೆ 30 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಏಜೆನ್ಸಿ ತಿಳಿಸಿದೆ.

ಸಾವು ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಅಣೆಕಟ್ಟಿನ ಸುತ್ತಮುತ್ತದ ಸುಮಾರು 70 ಗ್ರಾಮಗಳು ಜಲಾವೃತಗೊಂಡಿದ್ದು, ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶದ ಜನಸಂಖ್ಯೆಯ 77%ದಷ್ಟು ಜನರು ಸಂತ್ರಸ್ತರಾಗಿದ್ದಾರೆ. ಇವರಿಗೆ ಆಹಾರ, ನೀರು ಮತ್ತು ಆಶ್ರಯದ ತುರ್ತು ಅಗತ್ಯವಿದೆ. 10,000 ಜಾನುವಾರುಗಳು ಕಾಣೆಯಾಗಿವೆ ಮತ್ತು 70 ಶಾಲೆಗಳು ನಾಶವಾಗಿವೆ. ಅಣೆಕಟ್ಟು ಕುಸಿತದಿಂದ ಆಗಿರುವ ಹಾನಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ತಿಳಿಸಿದೆ.

ಈ ತಿಂಗಳು ಸುಡಾನ್‌ನಲ್ಲಿ ಧಾರಾಕಾರ ಮಳೆಯು ಒಟ್ಟಾರೆಯಾಗಿ 3,17,000ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ. ಇವರಲ್ಲಿ 1,18,000ಕ್ಕೂ ಅಧಿಕ ಜನರು ನೆಲೆ ಕಳೆದುಕೊಂಡಿದ್ದಾರೆ ಎಂದು ತಿಳಿಸಲಾಗಿದೆ.

Join Whatsapp
Exit mobile version