Home ಟಾಪ್ ಸುದ್ದಿಗಳು ಸೌದಿ: ಕಾನೂನು ಉಲ್ಲಂಘಿಸಿದ 10 ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರ ಬಂಧನ

ಸೌದಿ: ಕಾನೂನು ಉಲ್ಲಂಘಿಸಿದ 10 ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರ ಬಂಧನ

ರಿಯಾದ್: ಕಾರ್ಮಿಕ ಮತ್ತು ನಿವಾಸ ಕಾನೂನುಗಳ ಉಲ್ಲಂಘನೆಗಳನ್ನು  ಪತ್ತೆಹಚ್ಚುವ ತಪಾಸಣೆ ಕಾರ್ಯಾಚರಣೆ ಸೌದಿ ಅರೇಬಿಯಾದಲ್ಲಿ ಮುಂದುವರೆದಿದ್ದು, ಒಂದು ವಾರದೊಳಗೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 10,937 ವಲಸಿಗರನ್ನು ಬಂಧಿಸಲಾಗಿದೆ.

ಮುಸ್ಲಿಮೇತರ ಅಮೆರಿಕನ್ ಪತ್ರಕರ್ತನಿಗೆ ಅಕ್ರಮವಾಗಿ  ಮಕ್ಕಾ ಪ್ರವೇಶಿಸಲು ಸಹಾಯ ಮಾಡಿದ ಸೌದಿ ಪ್ರಜೆಯನ್ನು ಮಕ್ಕಾ ಪೊಲೀಸರು ಬಂಧಿಸಿದ ನಂತರ ಈ ತಪಾಸಣಾ ಕಾರ್ಯ ಆರಂಭವಾಗಿದೆ.

ಅದಕ್ಕೂ ಮೊದಲು 2017 ರಲ್ಲಿ, ಇಸ್ರೇಲಿ ಯಹೂದಿ ಬೆನ್ ಟ್ಜಿಯಾನ್ ಮದೀನಾದ ಮಸೀದಿ ಅಲ್-ನಬವಿಯನ್ನು ಭೇಟಿ ಮಾಡಿದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

ಜುಲೈ 14 ರಿಂದ ಜುಲೈ 20 ರವರೆಗೆ ಭದ್ರತಾ ಪಡೆಗಳು ಮತ್ತು ಜವಾಝಾತ್ ನ ವಿವಿಧ ಘಟಕಗಳ ಸಹಕಾರದೊಂದಿಗೆ ನಡೆಸಿದ ಕ್ಷೇತ್ರ ತಪಾಸಣೆಯಲ್ಲಿ ಗೃಹ ಸಚಿವಾಲಯದ ಅಧಿಕಾರಿಗಳು ಹಲವಾರು ವಲಸಿಗರನ್ನು ಬಂಧಿಸಿದ್ದಾರೆ.

6,564 ಮಂದಿ ದೇಶದ ಇಖಾಮಾ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ, ಹಾಗೂ  ಗಡಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 2,852 ಜನರನ್ನು ಬಂಧಿಸಲಾಗಿದೆ. ಕಾರ್ಮಿಕ ಕಾನೂನು ಉಲ್ಲಂಘನೆಗಾಗಿ 1,521 ಜನರನ್ನು ಬಂಧಿಸಲಾಗಿದೆ.

ಸೌದಿ ಅರೇಬಿಯಾದಿಂದ ಇತರ ನೆರೆಯ ದೇಶಗಳಿಗೆ ಕಾನೂನು ಉಲ್ಲಂಘಿಸಿ ಪ್ರವೇಶಿಸಲು ಯತ್ನಿಸಿದ 30 ಜನರನ್ನು ಬಂಧಿಸಲಾಗಿದ್ದು, ಅವರಿಗೆ ವಸತಿ ಮತ್ತು ಪ್ರಯಾಣದ ವ್ಯವಸ್ಥೆ ಮಾಡಿದ್ದಕ್ಕಾಗಿ 9 ಜನರನ್ನು ಬಂಧಿಸಲಾಗಿದೆ.

ಅಕ್ರಮವಾಗಿ ಸೌದಿ ಅರೇಬಿಯಾಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ 350 ಮಂದಿ ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಶೇಕಡ 30ರಷ್ಟು ಮಂದಿ ಯೆಮೆನ್ ಮೂಲದವರು.

ಪ್ರಸ್ತುತ ನಿಯಮಗಳ ಉಲ್ಲಂಘನೆಗಾಗಿ ಒಟ್ಟು 59,898 ಮಂದಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ, ಅದರಲ್ಲಿ 56,458 ಪುರುಷರು ಮತ್ತು 3,440 ಮಹಿಳೆಯರು.

ಯಾರಾದರೂ ಯಾರಿಗಾದರೂ ದೇಶದೊಳಗೆ ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುವಂತೆ ಅವರಿಗೆ ನೆರವನ್ನು  ಒದಗಿಸುವ ಮೂಲಕ ಗಡಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದರೆ, ಅಂತಹವರಿಗೆ ಗರಿಷ್ಠ 15 ವರ್ಷಗಳ ಜೈಲು ಶಿಕ್ಷೆ,  , ಒಂದು ಮಿಲಿಯನ್ ರಿಯಾಲ್ ವರೆಗೆ ದಂಡ ವಿಧಿಸಲಾಗುವುದು ಎಂದು ಗೃಹ ಸಚಿವಾಲಯ ಎಚ್ಚರಿಸಿದೆ. ವಾಹನಗಳನ್ನು ಮತ್ತು ಆಶ್ರಯ ನೀಡಿದ ಸ್ಥಳವನ್ನು ಮುಟ್ಟುಗೋಲು ಹಾಕಿಕೊಳ್ಳುವುದರೊಂದಿಗೆ ಅವರ ಹೆಸರನ್ನು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು ಎಂದು ಎಚ್ಚರಿಸಿದೆ.

Join Whatsapp
Exit mobile version