Home ಟಾಪ್ ಸುದ್ದಿಗಳು ಭಾರತಕ್ಕೆ ಮತ್ತಷ್ಟು ಅಫ್ಘಾನ್ ಸಿಖ್ ಜನರ ಆಗಮನ

ಭಾರತಕ್ಕೆ ಮತ್ತಷ್ಟು ಅಫ್ಘಾನ್ ಸಿಖ್ ಜನರ ಆಗಮನ

ನವದೆಹಲಿ: ಅಫ್ಘಾನಿಸ್ತಾನದಿಂದ ಭಾರತಕ್ಕೆ ಮತ್ತಷ್ಟು ಸಿಖ್ ಜನರು ವಲಸೆ ಬರುತ್ತಿದ್ದು, ಮಕ್ಕಳೂ ಸೇರಿ 30 ಸಿಖ್ ಜನರ ತಂಡವು   ಆಗಸ್ಟ್ 4ರಂದು ನವದೆಹಲಿಗೆ ಬಂದು ಸೇರಿತು.

ವಾಣಿಜ್ಯ ಬಳಕೆಯ ಕಾಮ್ ಏರ್ ವಿಮಾನವು ಅವರನ್ನು ಕಾಬೂಲಿನಿಂದ ಹೊತ್ತು ದಿಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅವರು ಅಲ್ಲಿಂದ ತಿಲಕ್ ನಗರದಲ್ಲಿರುವ ಅರ್ಜುನ್ ದೇವ್ ಗುರುದ್ವಾರಕ್ಕೆ ತೆರಳಲಿದ್ದಾರೆ ಎಂದು ಎಸ್ ಜಿಪಿಸಿ- ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ ಹೇಳಿದೆ.

ಎಸ್ ಜಿಪಿಸಿ- ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯವರು ಲೋಕ ವೇದಿಕೆ ಮತ್ತು ಭಾರತ ಸರಕಾರದ ಸಹಯೋಗದಿಂದ ಅಫ್ಘಾನಿಸ್ತಾನದಿಂದ ಬರುವ ಸಿಖ್ ಮತ್ತು ಹಿಂದೂಗಳನ್ನು ಕರೆಸಿಕೊಳ್ಳುವ ಏರ್ಪಾಟು ಮಾಡುತ್ತಿದೆ.

ಅಫ್ಘಾನಿಸ್ತಾನದ ಅತಿ ದೊಡ್ಡ ಖಾಸಗಿ ವಾಣಿಜ್ಯ ವಿಮಾನಯಾನ ಸಂಸ್ಥೆಯಾದ ಕಾಮ್ ಏರ್ ನಲ್ಲಿ ಜು. 14ರಂದು 21 ಮಂದಿ ಸಿಖ್ ಜನರು ಕಾಬೂಲಿನಿಂದ ದಿಲ್ಲಿಗೆ ಬಂದಿದ್ದರು. ಕಳೆದ ತಿಂಗಳು ಅಫ್ಘಾನಿಸ್ತಾನದಿಂದ 32 ಜನ ಹಿಂದೂ ಮತ್ತು ಸಿಖ್ ಜನರನ್ನು ಭಾರತಕ್ಕೆ ಕರೆತರಲಾಗಿದೆ. ಅಫ್ಘಾನಿಸ್ತಾನದಲ್ಲಿ 700ರಷ್ಟು ಸಿಖ್ ಮತ್ತು ಹಿಂದೂಗಳು ಇದ್ದು 2021ರ ಆಗಸ್ಟ್ 15ರಂದು ತಾಲಿಬಾನ್ ಹತೋಟಿ ಪಡೆದ ಮೇಲೆ ಹಲವರು ಪರದೇಶಗಳಿಗೆ ಹೋಗಿದ್ದಾರೆ ಎನ್ನಲಾಗಿದೆ.

ಎಸ್ ಜಿಪಿಸಿ ಮೂಲಕ ಭಾರತಕ್ಕೆ ಬರಲು ಇನ್ನೂ 110 ಮಂದಿ ಅಫ್ಘಾನ್ ಹಿಂದೂ ಮತ್ತು ಸಿಖ್ ಗಳು ಕಾದಿದ್ದು ಭಾರತ ಸರಕಾರದ ವೀಸಾ ನೀಡುವಿಕೆ ತಡವಾಗುತ್ತಿದೆ ಎನ್ನಲಾಗಿದೆ. ಹೀಗೆ ಬರುವವರ ವಿಮಾನ ಶುಲ್ಕವನ್ನು ಎಸ್ ಜಿಪಿಸಿ ಮಾನವೀಯತೆಯಿಂದ ತಾನೇ ನೀಡುತ್ತಿದೆ.

ಎಸ್ ಜಿಪಿಸಿಯು ಭಾರತದಲ್ಲಿ ಬಂದವರು ನೆಲೆಯೂರಲು ಬೇಕಾದ ಸಹಾಯವನ್ನೂ ಮಾಡುತ್ತಿದೆ. ವಿಶ್ವ ಪಂಜಾಬ್ ಆರ್ಗನೈಜೇಶನ್, ಸೋಬ್ತಿ ಫೌಂಡೇಶನ್ ಇತರ ಸಾಮಾಜಿಕ ಸಂಘಟನೆಗಳ ಸಹಕಾರವನ್ನು ಈ ಮರು ವಸತಿಗೆ ಪಡೆಯಲಾಗುತ್ತಿದೆ.

ಈ ವರುಷ ಜೂನ್ 18ರಂದು ಇಸ್ಲಾಮಿಕ್ ಸ್ಟೇಟ್ ಕೊರೊಸಾನ್ ಪ್ರಾಂತ್ಯದವರು ಕಾಬೂಲಿನ ಕರ್ತೇ ಪರ್ವಾನ್ ಗುರುದ್ವಾರದ ಮೇಲೆ ದಾಳಿ ಮಾಡಿದ್ದರು. ಅದರಲ್ಲಿ ಸಿಖ್ ಅಲ್ಲದವರೂ ಸೇರಿ 50ರಷ್ಟು ಜನರು ಸಾವಿಗೀಡಾಗಿದ್ದರು.

Join Whatsapp
Exit mobile version