ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ: ಹಿಂದೂ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷ ವಿಚಿತ್ರ ಬೇಡಿಕೆ

Prasthutha|

- Advertisement -

ನವದೆಹಲಿ: ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಚಂದ್ರಯಾನ -3ರ ಲ್ಯಾಂಡಿಂಗ್ ಸ್ಪಾಟ್‌ ನ್ನು ಅದರ ರಾಜಧಾನಿಯನ್ನಾಗಿ ಮಾಡುವಂತೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಸರಕಾರದ ಮುಂದೆ ವಿಚಿತ್ರವಾದ ಬೇಡಿಕೆ ಮುಂದಿಟ್ಟಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ಚಂದ್ರನನ್ನು ಹಿಂದೂ ಸನಾತನ ರಾಷ್ಟ್ರ ಎಂದು ಸಂಸತ್ತಿನಲ್ಲಿ ಘೋಷಿಸಬೇಕು. ಚಂದ್ರಯಾನ-3 ಇಳಿದಿರುವ ಶಿವಶಕ್ತಿ ಪಾಯಿಂಟ್‍ನ್ನು ಅದರ ರಾಜಧಾನಿಯಾಗಿ ಅಭಿವೃದ್ಧಿಪಡಿಸಬೇಕು. ಆದ್ದರಿಂದ ಯಾವುದೇ ಜಿಹಾದಿ ಮನಸ್ಥಿತಿಗಳು ಅಲ್ಲಿಗೆ ತಲುಪಬಾರದು ಎಂದಿದ್ದಾರೆ.

- Advertisement -

ಇತರ ಧರ್ಮಗಳಿಗಿಂತ ಮೊದಲು ಭಾರತ ಸರ್ಕಾರವು ಚಂದ್ರನ ಮೇಲೆ ತನ್ನ ಮಾಲೀಕತ್ವವನ್ನು ಪ್ರತಿಪಾದಿಸಬೇಕು ಮತ್ತು ಅದಕ್ಕಾಗಿ ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಬೇಕೆಂದು ತನ್ನ ಮಾತುಗಳಿಂದಲೇ ವಿವಾದಕ್ಕೆ ಹೆಸರಾಗಿರುವ ಚಕ್ರಪಾಣಿ ಮಹಾರಾಜ್ ಹೇಳಿದ್ದಾರೆ.

ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಜಾಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿವಶಕ್ತಿ ಎಂದು ಹೆಸರಿಟ್ಟಿದ್ದರು. ಅಲ್ಲದೇ ಚಂದ್ರಯಾನ-2 ಪತನಗೊಂಡ ಜಾಗಕ್ಕೆ ತಿರಂಗ ಎಂದು ಹೆಸರಿಟ್ಟಿದ್ದರು.