Home ಟಾಪ್ ಸುದ್ದಿಗಳು ಮೂಡಿಗೆರೆ: ಸಹೋದರರ ನಡುವೆ ಜಮೀನು ವಿವಾದ, ಬಾಲಕಿಯ ಕೊಲೆ ಯತ್ನ

ಮೂಡಿಗೆರೆ: ಸಹೋದರರ ನಡುವೆ ಜಮೀನು ವಿವಾದ, ಬಾಲಕಿಯ ಕೊಲೆ ಯತ್ನ

ಮೂಡಿಗೆರೆ: ಸಹೋದರರ ನಡುವೆ ಜಮೀನಿನ ವಿಚಾರವಾಗಿ ಉಂಟಾದ ಕಲಹವು ತಾರಕಕ್ಕೇರಿದ ಪರಿಣಾಮ ಕತ್ತಿಯಿಂದ ಬಾಲಕಿಯ ಕೈ ಕಡಿದು ಕೊಲೆಗೆ ಯತ್ನಿಸಿರುವ ಘಟನೆ  ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದ ರಮೇಶ್ ಹಾಗೂ ಜಯಂತ್ ಸಹೋದರರ ನಡುವೆ ಜಮೀನು ವಿಚಾರವಾಗಿ ಈ ಹಿಂದಿನಿಂದ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ರಮೇಶ್ ಅವರು ಜಯಂತ್ ನ ಸಹೋದರನಾಗಿದ್ದಾನೆ.

ಮೊನ್ನೆ ರಾತ್ರಿ ಜಯಂತ್, ಅವರ ಹೆಂಡತಿ ಹಾಗೂ ಮಗ ಜ್ಞಾನದೇವ್ ಮೂವರು ಸೇರಿ ಜಾಗದ ವಿಚಾರವಾಗಿ ಸಹೋದರನ ಕುಟುಂಬದವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.  ಮಾತಿಗೆ ಮಾತು ಬೆಳೆದು ಜಯಂತ್ ಅವರ ಪುತ್ರ ಜ್ಞಾನದೇವ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಹೋದರ ಮಗಳ ಕೈಗೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಕತ್ತಿಯಿಂದ ಹಲ್ಲೆ ಮಾಡಿ ಕೊಲೆ ಮಾಡಲು ಜಯಂತ್, ಅವರ ಪತ್ನಿ ಹಾಗೂ ಪುತ್ರ ಜ್ಞಾನದೇವ್ ಯತ್ನಿಸಿದ್ದಾರೆಂದು ಆರೋಪಿಸಿ ಮೂಡಿಗೆರೆಯ ಬಣಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆಗೀಡಾದ ಬಾಲಕಿ ಪ್ರಕರಣ ದಾಖಲು ಮಾಡಿದ್ದು, ಈ ಸಂಬಂಧ ಕಾರ್ಯಾಚರಣೆಗಿಳಿದ ಪೊಲೀಸರು ಜಯಂತ್ ಗೌಡ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

 ಈ ಸಂಬಂಧ ವಿಚಾರಣೆ ಆರಂಭವಾಗಿದ್ದು ,ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು ಅವರ ಬಂಧನ ಹಾಗೂ ವಿಚಾರಣೆಯ ನಂತರ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದೆ.

Join Whatsapp
Exit mobile version