Home ಅಪರಾಧ ಮುಸ್ಲಿಮ್ ಯುವಕರನ್ನು ಸುಟ್ಟು ಕೊಂದ ಪ್ರಕರಣ: ಮೋನು ಮನೇಸರ್’ನ ಪಿಸ್ತೂಲ್ ಲೈಸನ್ಸ್ ರದ್ದು

ಮುಸ್ಲಿಮ್ ಯುವಕರನ್ನು ಸುಟ್ಟು ಕೊಂದ ಪ್ರಕರಣ: ಮೋನು ಮನೇಸರ್’ನ ಪಿಸ್ತೂಲ್ ಲೈಸನ್ಸ್ ರದ್ದು

ರಾಯಿಪುರ: ರಾಜಸ್ತಾನದ ನಾಸಿರ್ ಮತ್ತು ಜುನೈದ್ ಅವರನ್ನು ಸುಟ್ಟು ಕೊಂದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ನಾಲ್ವರಲ್ಲಿ ಒಬ್ಬನಾದ ಸಂಘಪರಿವಾರದ ಮುಖಂಡ ಮೋಹಿತ್ ಯಾದವ್ ಅಲಿಯಾಸ್ ಮೋನು ಮನೇಸರ್’ನ ಶಸ್ತ್ರ ಪರವಾನಗಿ ರದ್ದು ಮಾಡುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ.

ಪೊಲೀಸರು ಇತರ ಮೂವರು ಗೋರಕ್ಷಕರ ಇತಿಹಾಸವನ್ನು ಕೂಡ ಕೆದಕುತ್ತಿದ್ದು, ಅವರು ಶಸ್ತ್ರ ಪರವಾನಗಿ ಹೊಂದಿರುವರೇ, ಹೀನ ಅಪರಾಧ ಚರಿತ್ರೆ ಹೊಂದಿರುವವರೇ ಎನ್ನುವುದನ್ನು ಪರಿಶೀಲಿಸುತ್ತಿದ್ದಾರೆ.

ಕೊಲೆಯಾದ ನಾಸಿರ್ ಮತ್ತು ಜುನೈದ್ ರಾಜಸ್ತಾನದ ಭರತ್’ಪುರ ಜಿಲ್ಲೆಯ ಗಟ್ಮೀಕ ಗ್ರಾಮದವರು. ಹರಿಯಾಣದ ಬಿವಾನಿ ಜಿಲ್ಲೆಯ ಲೋಹರುನಲ್ಲಿ ಬೋಲೆರೊ ಕಾರಿನೊಳಗೆ ಅವರನ್ನು ಕೂಡಿ ಹಾಕಿ ಸುಟ್ಟು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿವೆ. ಅವರ ದೇಹಗಳು ಗುರುವಾರ ಕಾರಿನೊಳಗೆ ಪತ್ತೆಯಾಗಿದ್ದವು.

ಸಾವಿಗೀಡಾದವರ ಕುಟುಂಬದವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಐವರು ಬಜರಂಗ ದಳದವರ ಹೆಸರುಗಳನ್ನು ಸೂಚಿಸಿದ್ದಾರೆ.

ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವವರು ಹೀನ ಅಪರಾಧ ಕೃತ್ಯ ನಡೆಸಿ ಮೊಕದ್ದಮೆ ದಾಖಲಾದರೆ ಅಂತಹವರ ಶಸ್ತ್ರ ಪರವಾನಗಿ ರದ್ದು ಪಡಿಸಲವಕಾಶವಿದೆ ಎಂದು ಡಿಸಿಪಿ ಮನ್’ಬೀರ್ ಸಿಂಗ್ ಹೇಳಿದರು.

“ಮೋನು ಯಾದವ್ ಶಸ್ತ್ರ ಪರವಾನಗಿ ರದ್ದು ಪಡಿಸುವ ಪ್ರಕ್ರಿಯೆ ಆರಂಭವಾಗಿದ್ದು, ಸದ್ಯವೇ ಆತನ ಪರವಾನಗಿ ರದ್ದಾಗಲಿದೆ. ಗುರುಗಾಂವ್ ಪೊಲೀಸರ ಸಹಿತ ಬೇರೆ ಬೇರೆ ಪೊಲೀಸ್ ತಂಡಗಳು ಆತನಿಗಾಗಿ ಹುಡುಕುತ್ತಿದ್ದು ಸದ್ಯವೇ ಆತನನ್ನು ಬಂಧಿಸಲಾಗುವುದು” ಎಂದೂ ಡಿಸಿಪಿ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಮೂಡಿ ಬಂದಂತೆ ಮನೆಯ ಹತ್ತಿರದ ಸಿಸಿಟೀವಿ ದೃಶ್ಯಾವಳಿಯ ಪ್ರಕಾರ ಫೆಬ್ರವರಿ 15ರ ಬೆಳಿಗ್ಗೆ 9 ಗಂಟೆಗೆ ಮೋನು ಯಾದವ್ ಮನೆಯಲ್ಲಿ ಇದ್ದ.

ಮೃಗೀಯ ಹತ್ಯೆಯ ಮುಖ್ಯ ಆರೋಪಿ ಮೋನು ಪರಾರಿಯಾಗಿದ್ದಾನೆ. ಗುರುಗಾಂವ್ ಜಿಲ್ಲಾ ಬಜರಂಗ ದಳದ ಅಧ್ಯಕ್ಷನಾಗಿರುವ ಮೋನು ಯಾದವ್ 2011ರಲ್ಲಿ ಜಿಲ್ಲಾ ಗೋರಕ್ಷಕ ದಳಕ್ಕೆ ಸೇರಿದ್ದಾನೆ. ಫೆಬ್ರವರಿ 7ರಂದು ಪಟೌಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೋನು ಮನೇಸರ್ ವಿರುದ್ಧ ಕೊಲೆ ಯತ್ನದ ಮೊಕದ್ದಮೆ ದಾಖಲಾಗಿದೆ.

ದನ ಸಾಗಣೆ ಮಾಡುವವರನ್ನು ಬೆನ್ನಟ್ಟುವುದು, ದಾಳಿ ಮಾಡುವುದು, ಅಪಹರಿಸುವುದು, ಹಲ್ಲೆ ಮಾಡುವುದು ಇತ್ಯಾದಿ ಕೆಲಸಗಳಲ್ಲಿ ಮೋನು ಯಾದವ್ ಪಾಲ್ಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version