ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌವ್’ನ ಸುಹೇಲ್’ದೇವ್ ಭಾರತೀಯ ಸಮಾಜ ಪಕ್ಷದ ಶಾಸಕ ಮತ್ತು ಗ್ಯಾಂಗ್’ಸ್ಟರ್ ಮುಖ್ತಾರ್ ಅನ್ಸಾರಿ ಅವರ ಪುತ್ರ ಅಬ್ಬಾಸ್ ಅನ್ಸಾರಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್’ರಾಜ್’ನಲ್ಲಿರುವ ಕೇಂದ್ರ ತನಿಖಾ ಏಜೆನ್ಸಿ ಕಚೇರಿಯಲ್ಲಿ ಸುದೀರ್ಘ ವಿಚಾರಣೆಯ ಬಳಿಕ ಅಬ್ಬಾಸ್ ಅನ್ಸಾರಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆತನ ತಂದೆ ಮತ್ತು ಕುಟುಂಬದ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಬ್ಬಾಸ್ ಅನ್ಸಾರಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಕಳೆದ ತಿಂಗಳು ಇಡಿ ಮುಖ್ತಾರ್ ಅನ್ಸಾರಿ ಅವರ ಬಳಿಯಿಂದ ಸುಮಾರು ರೂ. 1.48 ಕೋಟಿ ಮೌಲ್ಯದ ಏಳು ಸ್ಥಿರ ಆಸ್ತಿಗಳನ್ನು ಜಫ್ತಿ ಮಾಡಿತ್ತು ಎಂದು ಹೇಳಲಾಗಿದೆ.
ಈ ಹಿಂದೆ ಐದು ಬಾರಿ ಶಾಸಕರಾಗಿರುವ ಮುಖ್ತಾರ್ ಅನ್ಸಾರಿ ಅವರು ಪ್ರಸ್ತುತ ಉತ್ತರ ಪ್ರದೇಶದ ಬಂದಾ ಜೈಲಿನಲ್ಲಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 59 ವರ್ಷದ ಮುಖ್ತಾರ್ ಅವರನ್ನು ಇಡಿ ವಿಚಾರಣೆ ನಡೆಸಿತ್ತು.
ದೆಹಲಿಯಲ್ಲಿರುವ ಅವರ ಹಿರಿಯ ಸಹೋದರ, ಬಿಎಸ್ಪಿ ಸಂಸದ ಅಫ್ಝಲ್ ಅನ್ಸಾರಿ ಅವರ ದೆಹಲಿ, ಗಾಝಿಪುರ, ಮುಹಮ್ಮದಾಬಾದ್, ಮಾವ್ ಮತ್ತು ಲಕ್ನೋದಲ್ಲಿರುವ ನಿವಾಸ ಮತ್ತು ಹಲವೆಡೆ ಆಗಸ್ಟ್’ನಲ್ಲಿ ಇಡಿ ದಾಳಿ ನಡೆಸಿತ್ತು.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ತಾರ್ ಅನ್ಸಾರಿ, ಪತ್ನಿ, ಆಕೆಯ ಇಬ್ಬರು ಸಹೋದರರು ನಡೆಸುವ ವಿಕಾಸ್ ಕನ್’ಸ್ಟ್ರಕ್ಷನ್ಸ್ ಎಂಬ ಕಂಪೆನಿಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಅನೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮುಖ್ತಾರ್ ಅನ್ಸಾರಿ ವಿರುದ್ಧ ಭೂಕಬಳಿಕೆ, ಕೊಲೆ ಮತ್ತು ಸುಲಿಗೆ ಆರೋಪ ಸೇರಿದಂತೆ ಕನಿಷ್ಠ 49 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಡಿ ಕಣ್ಗಾವಲಿನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದಲ್ಲಿ ಅವರು ಕೊಲೆ ಯತ್ನ, ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಆಗಸ್ಟ್’ನಲ್ಲಿ ಘಾಝಿಪುರ ಜಿಲ್ಲಾಡಳಿತವು 1.901 ಹೆಕ್ಟೇರ್ ಅಳತೆಯ ಮತ್ತು ರೂ. 6 ಕೋಟಿಗೂ ಹೆಚ್ಚು ಮೌಲ್ಯದ ಎರಡು ಪ್ಲಾಟ್‌ಗಳನ್ನು ವಶಪಡಿಸಿಕೊಂಡಿದ್ದು, ಅದನ್ನು ಮುಕ್ತಾರ್ ಅನ್ಸಾರಿಯವರ ಅಕ್ರಮ ಆದಾಯವನ್ನು ಬಳಸಿಕೊಂಡು ಖರೀದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈನಲ್ಲಿ ಗ್ಯಾಂಗ್’ಸ್ಟರ್ ಕಾಯ್ದೆಯಡಿ ಅಫ್ಜಲ್ ಅನ್ಸಾರಿಯ ರೂ. 14.90 ಕೋಟಿ ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಜಪ್ತಿ ಮಾಡಿದ್ದರು.