ಕಾರವಾರ: ಕೆಮಿಕಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ಯಲ್ಲಾಪುರ ತಾಲೂಕಿನ ಆರೆಬೈಲ್ ಕ್ರಾಸ್ ಇಡಗುಂದಿ ಬಳಿ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಬಂಧಿಸಿಲ್ಲ.
ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ 66ರ ಸಂಚಾರವನ್ನು ಕೆಲಕಾಲ ಬಂದ್ ಮಾಡಲಾಗಿದ್ದು ಬೆಂಕಿ ನಂದಿಸಿದ ಹಿನ್ನೆಲೆಯಲ್ಲಿ ಸಂಚಾರ ಮುಕ್ತವಾಗಿದೆ.
ಬೆಳಗ್ಗೆ ಸುಮಾರು 5.30ರಿಂದ 5.45ರ ನಡುವೆ ಅಂಕೋಲ ಭಾಗದ ಕಡೆ ತೆರಳುತಿದ್ದ ಟ್ಯಾಂಕರ್ ಚಾಲಕನ ನಿರ್ಲಕ್ಷದಿಂದ ಘಾಟಿಯಲ್ಲಿ ಪಲ್ಟಿಯಾಗಿ ಸ್ಫೋಟಗೊಂಡಿದೆ. ಈ ವೇಳೆ ಚಾಲಕನಿಗೆ ಅಲ್ಪ ಗಾಯವಾಗಿದ್ದು ತಕ್ಷಣದಲ್ಲಿ ಆತನನ್ನು ರಕ್ಷಣೆ ಮಾಡಲಾಗಿದೆ.
ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿದ್ದು, ಸಮೀಪದ ಮರ ಗಿಡಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ರೈತರ ಗದ್ದೆಗಳಿಗೆ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಸ್ಫೋಟದಿಂದ 500ಮೀಟರ್ ಗೂ ಹೆಚ್ಚು ದೂರು ಬೆಂಕಿ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸುಮಾರು 300-400 ಮೀಟರ್ ದೂರಗಳಷ್ಟು ಏನಾಗಿದೆ ಎನ್ನುವ ಮಾಹಿತಿ ದೊರೆಯದೆ ಅಧಿಕಾರಿಗಳು ಕಂಗಾಲಾಗಿದ್ದಾರೆ.
ಯಲ್ಲಾಪುರದ ಇಡಗುಂದಿ ಬಳಿ ಪಲ್ಟಿಯಾಗಿ ಬಿದ್ದಿರುವ ಕೆಮಿಕಲ್ ಟ್ಯಾಂಕರ್ ನಿಂದ ಹೊರಕ್ಕೆ ಬಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ