►ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ
ಮೂಡಬಿದ್ರೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ, ಅವರ ಉಮೇದುವಾರಿಕೆ ಸಲ್ಲಿಸುವಾಗಲೂ ಜೊತೆಯಾಗಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮೋಹನ್ ಆಳ್ವ ನಿವಾಸದಲ್ಲಿ ಇಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಆಯೋಜಿಸಿದ್ದ ಉಪಹಾರ ಕೂಟಕ್ಕೆ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.
ಇಂದು ಮಂಗಳೂರು ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮೋಹನ್ ಆಳ್ವ ಅವರ ನಿವಾಸದಲ್ಲಿ ಬೆಳಗ್ಗಿನ ಉಪಾಹಾರ ಕೂಟವನ್ನು ಏರ್ಪಡಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಚುನಾವಣೆಯಲ್ಲಿ ನೇರವಾಗಿ ಬಿಜೆಪಿಯನ್ನು ಬೆಂಬಲಿಸಿದವರ ಮನೆಗೆ ಹೋಗುವುದು ಸರಿಯಲ್ಲ ಎಂಬ ಮಾತು ಕೇಳಿ ಬಂದಿತ್ತು. ಸಚಿವರೊಂದಿಗಿನ ಕಾರ್ಯಕ್ರಮದಲ್ಲಿ ಭಾಗಿಯಾಗದೇ ದೂರು ಉಳಿಯುವ ಎಚ್ಚರಿಕೆ ಕೂಡ ಕಾರ್ಯಕರ್ತರು ನೀಡಿದ್ದರು ಎನ್ನಲಾಗಿದೆ.
ಬಿಜೆಪಿ ಬೆಂಬಲಿಗರ ನಿವಾಸದಲ್ಲಿ ಉಪಹಾರ ಕೂಟ ಏರ್ಪಡಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಕೈ ಕಾರ್ಯಕರ್ತರು ಪಕ್ಷದ ಮುಖಂಡರಲ್ಲಿ ಅಸಾಮಾಧಾನ ಹೇಳಿಕೊಂಡಿದ್ದರು. ಜೊತೆಗೆ ಸಚಿವರ ಕಾರ್ಯಕ್ರಮದಲ್ಲಿ ಭಾಗವಹಿಸದೇ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು ಎಂದು ತಿಳಿದು ಬಂದಿದೆ.