Home ಟಾಪ್ ಸುದ್ದಿಗಳು ವಿವಿಗಳಲ್ಲಿ ಮೋದಿಯ ಪೋಸ್ಟರ್ ಮತ್ತು ಭಾಷಣ ಪ್ರಸಾರ ಮಾಡುವಂತೆ ನಿರ್ದೇಶನ

ವಿವಿಗಳಲ್ಲಿ ಮೋದಿಯ ಪೋಸ್ಟರ್ ಮತ್ತು ಭಾಷಣ ಪ್ರಸಾರ ಮಾಡುವಂತೆ ನಿರ್ದೇಶನ

ನವದೆಹಲಿ: ಗುಜರಾತ್ ಮತ್ತು ಅಸ್ಸಾಂನಲ್ಲಿ ನಾಳೆ ಪ್ರಧಾನಿ ಮೋದಿ ವಿವಿಧ ಸೆಮಿಕಂಡಕ್ಟರ್‌ ಫ್ಯಾಕ್ಟರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದು, ಈ ಕಾರ್ಯಕ್ರಮಗಳ ಭಾಷಣವನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ ಎಂದು ಮಾಧ್ಯಮ ವರದಿಯಾಗಿದೆ.

ಗುಜರಾತ್‌ನ ಧೋಲೇರಾ ಮತ್ತು ಸನಂದ್ ಹಾಗೂ ಅಸ್ಸಾಂನ ಮೋರಿಗಾಂವ್‌ನಲ್ಲಿ ಸೆಮಿಕಂಡಕ್ಟರ್‌ ಫ್ಯಾಕ್ಟರಿಗಳ ಶಂಕುಸ್ಥಾಪನೆ‌ ನಾಳೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಪ್ರದರ್ಶಿಸಲು ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ.

ಇದನ್ನು “ಚುನಾವಣಾ ಪ್ರಚಾರ ಕಾರ್ಯಕ್ರಮ” ಎಂದು ಕರೆದ ಕೆಲವು ಶಿಕ್ಷಣ ತಜ್ಞರು, ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದು 2024ರ ಲೋಕಸಭಾ ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಮತದಾರರನ್ನು ತಲುಪುವ  ಬಿಜೆಪಿಯ ಕೊನೆಯ ಪ್ರಯತ್ನದ ಭಾಗವಾಗಿದೆ ಎಂದು ಹೇಳಲಾಗಿದೆ.

ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಮೋದಿಯ ಚಿತ್ರವಿರುವ ‘ವಿಕಸಿತ್‌ ಭಾರತ್’ ಪೋಸ್ಟರ್‌ಗಳನ್ನು ಹಾಕುವಂತೆ ಶಿಕ್ಷಣ ಸಚಿವಾಲಯ ಸಂಸ್ಥೆಗಳಿಗೆ ಸೂಚಿಸಿದೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ರಾಜ್ಯ ಮಟ್ಟದ ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಈ ಬಗ್ಗೆ ಸೂಚನೆಯನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.

Join Whatsapp
Exit mobile version