ಮುಂಬೈ: ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ ಎರಡೇ ಗಂಟೆ ನಿದ್ರೆ ಮಾಡುತ್ತಾರೆ, ಉಳಿದ 22 ಗಂಟೆ ದೇಶಕ್ಕಾಗಿ ವ್ಯಯಿಸುತ್ತಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ ಕೇವಲ 2 ಗಂಟೆ ನಿದ್ರೆ ಮಾಡುತ್ತಿದ್ದು, ದೇಶಕ್ಕಾಗಿ 22 ಗಂಟೆ ಕೆಲಸ ಮಾಡುತ್ತಿದ್ದಾರೆ. ಅದಲ್ಲದೇ ಅವರು ನಿದ್ರೆಯೇ ಮಾಡದೇ ಪ್ರತಿ ನಿಮಿಷವೂ ದೇಶ ಸೇವೆ ಮಾಡುವ ಯೋಚನೆಯಲ್ಲಿರುತ್ತಾರೆ ಎಂದಿದ್ದಾರೆ.
ಬಿಜೆಪಿ ಕಾರ್ಯಕರ್ತರೊಂದಿಗೆ ಕೋಲಾಪುರದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಚಂದ್ರಕಾಂತ್ ಪಾಟೀಲ್, ಪ್ರಧಾನಿ ಮೋದಿ ಒಂದು ಕ್ಷಣವನ್ನೂ ಹಾಳು ಮಾಡಲು ಇಷ್ಟಪಡುವುದಿಲ್ಲ, ಆ ಉದ್ದೇಶದಿಂದಲೇ ಮೋದಿ ನಿದ್ರೆಯನ್ನು ತ್ಯಜಿಸಿ 24 ಗಂಟೆಯೂ ದೇಶಕ್ಕಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಿರಂತರ ಕಲಸ ಮಾಡುವ ಕಾರಣದಿಂದಲೇ ದೇಶದ ನಾನಾ ಭಾಗಗಳಲ್ಲಿ ಉಂಟಾಗುವ ಅಹಿತಕರ ಘಟನೆಗಳ ಬಗ್ಗೆ ಮೋದಿಗೆ ಮಾಹಿತಿ ಲಭಿಸುತ್ತದೆ ಎಂದು ಹೇಳಿದ್ದಾರೆ.