‘ಮೋದಿಯೇ ಕೊರೋನಾ ಸೂಪರ್ ಸ್ಪ್ರೆಡರ್’ : ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ.ನವಜೋತ್ ದಹಿಯಾ ಟೀಕೆ

Prasthutha|

ಹೊಸದಿಲ್ಲಿ : ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವಜೋತ್ ದಹಿಯಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೊರೋನಾ ‘ಸೂಪರ್ ಸ್ಪ್ರೆಡರ್’ ಎಂದು ಟೀಕಿಸಿದ್ದು ಕೋವಿಡ್ 2ನೆ ಅಲೆಗೆ ಮೋದಿಯವರೇ ಕಾರಣ ಎಂದು ಆರೋಪಿಸಿದ್ದಾರೆ.

- Advertisement -

“ವೈದ್ಯಕೀಯ ಸಮೂಹವು ಜನರಿಗೆ ಕಡ್ಡಾಯವಾದ ಕೋವಿಡ್ ಮಾನದಂಡಗಳನ್ನು ಅರ್ಥ ಮಾಡಿಸಲು ಶ್ರಮಿಸುತ್ತಿದ್ದರೆ, ಎಲ್ಲಾ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಯಲ್ಲಿ ತೂರುವ ದೊಡ್ಡ ರಾಜಕೀಯ ರ‍್ಯಾಲಿಗಳನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿದೆ” ಎಂದು ಡಾ ದಹಿಯಾ ದಿ ಟ್ರಿಬ್ಯೂನ್‌ಗೆ ತಿಳಿಸಿದ್ದಾರೆ.

ಆರೋಗ್ಯ ಬಿಕ್ಕಟ್ಟಿನ ತೀವ್ರತೆಯ ಹೊರತಾಗಿಯೂ, ಚುನಾವಣಾ ರ‍್ಯಾಲಿಗಳು ಮತ್ತು ಹರಿದ್ವಾರದಲ್ಲಿನ ಕುಂಭಮೇಳದಂತಹ ಧಾರ್ಮಿಕ ಸಭೆಗಳು ಮುಂದುವರೆಸಲಾಯಿತು, ಇದು, ಮಾರಣಾಂತಿಕ ವೈರಸ್ ಹರಡುವುದನ್ನು ನಿಭಾಯಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗಂಭೀರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.

- Advertisement -

“ವೈದ್ಯಕೀಯ ಆಮ್ಲಜನಕದ ಕೊರತೆಯು ದೇಶದ ಪ್ರತಿಯೊಂದು ಭಾಗದಲ್ಲೂ ಅನೇಕ ರೋಗಿಗಳ ಸಾವಿಗೆ ಕಾರಣವಾಗಿದೆ, ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಹಲವಾರು ಯೋಜನೆಗಳು ಇನ್ನೂ ಕೇಂದ್ರ ಸರ್ಕಾರದಲ್ಲಿ ಬಾಕಿ ಉಳಿದಿವೆ, ಆದರೆ ಇಂತಹ ಪ್ರಮುಖ ಕಾರ್ಯಕ್ಕೆ ಮೋದಿ ಸರ್ಕಾರ ಯಾವುದೇ ಗಮನ ನೀಡಲಿಲ್ಲ’ ಎಂದು ದಹಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ವೈಫಲ್ಯವನ್ನು ಖಾಸಗಿ ವೈದ್ಯಕೀಯ ವಲಯ ಮತ್ತು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಲು ಯತ್ನಿಸಿದ ಪ್ರಧಾನಮಂತ್ರಿಯವರ ವಿರುದ್ಧ ಡಾ. ದಹಿಯಾ ಕಿಡಿ ಕಾರಿದ್ದಾರೆ.

ಭಾರತದಲ್ಲಿ ಕೋವಿಡ್ ಎರಡನೇ ಅಲೆಯನ್ನು ಮೋದಿ ಮತ್ತು ಅವರ ಸರಕಾರವು ನಿರ್ವಹಿಸುತ್ತಿರುವುದನ್ನು ಜಾಗತಿಕ ಸುದ್ದಿ ಸಂಸ್ಥೆಗಳು ವ್ಯಾಪಕವಾಗಿ ಟೀಕಿಸಿವೆ.

ದೇಶದಲ್ಲಿ ಸದ್ಯ ದೈನಂದಿನ ಕೇಸುಗಳ ಸಂಖ್ಯೆ 3.6 ಲಕ್ಷವನ್ನು ದಾಟಿದೆ ಮತ್ತು ಸಾವುಗಳ ಸಂಖ್ಯೆ 3 ಸಾವಿರದಷ್ಟಿದೆ.



Join Whatsapp