ದೇಶದೆಲ್ಲೆಡೆ ದ್ವೇಷದ ಪೆಟ್ರೋಲ್ ಸುರಿದಿರುವ ಮೋದಿ ಸರ್ಕಾರ: ಅಬ್ದುಲ್ ಮಜೀದ್ ಮೈಸೂರು

Prasthutha|

ಬೆಂಗಳೂರು: ಮೊದಲಿನಿಂದಲೂ ಮಾಧ್ಯಮಗಳು ಕೋಮುವಾದಿ ಮನುವಾದಿಗಳ ಕೈಯಲ್ಲಿದ್ದರೂ,  ಬೆಂಕಿಗೆ  ಸಮರ್ಥವಾಗಿ ಪೆಟ್ರೋಲ್ ಸುರಿಯುವವರು ಅವರಿಗೆ ಸಿಕ್ಕಿರಲಿಲ್ಲ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮೋದಿ ಸರ್ಕಾರ ದೇಶದೆಲ್ಲೆಡೆ ದ್ವೇಷದ ಪೆಟ್ರೋಲ್ ಸುರಿದಿದೆ. ಗೋದಿ ಮಾಧ್ಯಮ ಕಡ್ಡಿ ಗೀರುತಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರು ಹೇಳಿದ್ದಾರೆ .

- Advertisement -

 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಯಾವುದೇ ಫಾಸಿಸ್ಟ್ ಸರ್ಕಾರ ತನ್ನ ದೌರ್ಜನ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾದರೆ ಅದಕ್ಕೆ ಪ್ರೊಪಗಾಂಡದ ಅವಶ್ಯಕತೆ ಇರುತ್ತದೆ. ಅದನ್ನು ಸಾಮಾನ್ಯವಾಗಿ ಮಾಧ್ಯಮಗಳೇ ನಡೆಸುತ್ತವೆ. ಹಿಟ್ಲರ್ ನಂತರ ಆ ಮಟ್ಟದ ದ್ವೇಷದ ಪ್ರೊಪಗಾಂಡ ನಡೆಸುವಲ್ಲಿ ಮೋದಿ ನೇತೃತ್ವದ ಬಿಜೆಪಿಯ ಕೋಮುವಾದಿ ಸರ್ಕಾರ ಮತ್ತು ಮುಸ್ಲಿಂ ದ್ವೇಷಿ ಕೋಮುವಾದಿಗಳಿಂದ ತುಂಬಿ ಹೋಗಿರುವ ಭಾರತದ ಮಾಧ್ಯಮಗಳನ್ನು ಉದಾಹರಣೆಯಾಗಿ ನೋಡಬಹುದು ಎಂದು ಹೇಳಿದರು.

ಇತ್ತೀಚಿಗೆ ಲಕ್ನೌನ ನ್ಯೂಸ್ ನೇಷನ್ ಎಂಬ ಸುದ್ದಿ ಸಂಸ್ಥೆಯಿಂದ ರಾಜೀನಾಮೆ ಕೊಟ್ಟು ಹೊರಗೆ ಬಂದಂತಹ ಅನಿಲ್ ಯಾದವ್ ಅವರು ಈ ಎಲ್ಲವನ್ನು ಕೂಡ ವಿವರವಾಗಿ ಬಿಚ್ಚಿಟ್ಟಿದ್ದಾರೆ. ಗೋದಿ ಮಾಧ್ಯಮಗಳಲ್ಲಿ ಮೋದಿ ಮತ್ತು ಆದಿತ್ಯನಾಥ್ ಅವರ ವಿರುದ್ಧವಾಗಿ ಒಂದೇ ಒಂದು ಪದವನ್ನು ಕೂಡ ಬಳಸುವ ಹಾಗಿಲ್ಲ.   ಜನರನ್ನು ನಿರಂತರವಾಗಿ ಹಿಂದೂ ಮುಸ್ಲಿಂ ಕೋಮು ದ್ವೇಷದ ಚರ್ಚೆಗಳಲ್ಲಿ ವ್ಯಸ್ತರಾಗಿಡಬೇಕು ಎನ್ನುವಂಥ ಯೋಜಿತ ಸಂಚು ಯಾವ ರೀತಿ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಅವರು ತಮ್ಮ ಪೋಸ್ಟ್ ನಲ್ಲಿ ವಿವರವಾಗಿ ಹೇಳಿದ್ದಾರೆ. ದೇಶದಲ್ಲಿ ಇಂದು ಕೋಮು ದ್ವೇಷದ ವಾತಾವರಣ ಉಚ್ಚಘಟ್ಟದಲ್ಲಿರಲು ಈ ಮುಸ್ಲಿಂ ವಿರೋಧಿ ಕೋಮುವಾದಿ ಮಾಧ್ಯಮಗಳೇ ಕಾರಣ ಎಂದು ಅಬ್ದುಲ್ ಮಜೀದ್ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ದನದ ಮಾಂಸ ತಿಂದಿದ್ದಾರೆ ಎಂದು 2015ರಲ್ಲಿ ಅಖ್ಲಾಕ್ ಅವರನ್ನು ಬಡಿದು ಕೊಂದ ಘಟನೆಯಿಂದ ಹಿಡಿದು ಇಲ್ಲಿಯವರೆಗೆ ದೇಶದಲ್ಲಿ ನಡೆಯುತ್ತಿರುವಂತಹ ಪ್ರತಿಯೊಂದು ಕೋಮುಗಲಭೆ, ಮಾಬ್ ಲಿಂಚಿಂಗ್ ಮತ್ತು ಇಡೀ ದೇಶದಲ್ಲಿ ಹಿಂದೂ ವರ್ಸಸ್ ಮುಸ್ಲಿಂ ಅನ್ನುವಂತಹ ನಂಜಿನ ವಾತಾವರಣ ಸೃಷ್ಟಿಯಾಗಲು ಈ ಗೋದಿ ಮಾಧ್ಯಮಗಳೇ ನೇರ ಹೊಣೆ ಎಂದು ಅಬ್ದುಲ್ ಮಜೀದ್ ಆರೋಪಿಸಿದರು.

 ದಿನ ಬೆಳಗಾದರೆ ಹಿಂದೂ ಮುಸ್ಲಿಂ ಎಂದು ವಿಭಜಿಸುವ ಮತ್ತು ಒಬ್ಬರಲ್ಲಿ ಒಬ್ಬರಿಗೆ ದ್ವೇಷವನ್ನು ತುಂಬುವಂತಹ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾ, ಮೋದಿ ಸರ್ಕಾರವನ್ನು ಮತ್ತು ಹಿಂದುತ್ವ ಗೂಂಡಾ ಪಡೆಗಳ ಕೋಮು ದ್ವೇಷದ ಹಿಂಸಾತ್ಮಕ ಕೃತ್ಯಗಳನ್ನು ಬೆಂಬಲಿಸುತ್ತಾ ಈ ಕೋಮು ದ್ವೇಷಿ ಮಾಧ್ಯಮಗಳು ದೇಶದ ಪ್ರಜಾಪ್ರಭುತ್ವಕ್ಕೆ ಮತ್ತು ಭಾವೈಕ್ಯತೆಗೆ ದೊಡ್ಡ ಸವಾಲಾಗಿವೆ ಎಂದು ಅವರು ಹೇಳಿದರು.

ಮೊದಲೆಲ್ಲ ಪತ್ರಕರ್ತರು ವಿಶ್ವವಿದ್ಯಾಲಯಗಳಲ್ಲಿ ಪದವಿಗಳನ್ನು ಪಡೆದು ಮಾಧ್ಯಮದಲ್ಲಿ ಕೆಲಸಕ್ಕೆ ನೇಮಕವಾಗುತ್ತಿದ್ದರು. ಈಗ ಆರ್ ಎಸ್ ಎಸ್ ಶಾಖೆಗಳಲ್ಲಿ ಬ್ರೈನ್ ವಾಶ್ ಆದಂತಹ, ಅಲ್ಲಿ ಕೋಮು ದ್ವೇಷದಲ್ಲಿ ಪದವಿ ಪಡೆದಂತಹ ಕ್ರೂರ ಮನಸ್ಥಿತಿಗಳು ಮಾಧ್ಯಮದಲ್ಲಿ ತುಂಬಿಕೊಂಡಿರುವುದೇ ಇದಕ್ಕೆ ಮೂಲ ಕಾರಣ ಎಂದು ಅವರು ಹೇಳಿದರು.

ಈ ದೇಶಕ್ಕೆ ಶಾಂತಿ, ಸೌಹಾರ್ದತೆ ಮತ್ತು ಭ್ರಾತೃತ್ವದ ದೊಡ್ಡ ಇತಿಹಾಸ ಇದೆ. ಮೋದಿ ನೇತೃತ್ವದ ಈ ಫಾಸಿಸ್ಟ್ ಸರ್ಕಾರ ಮತ್ತು ಮನುವಾದಿ ಮುಸ್ಲಿಂ ವಿರೋಧಿ  ಗೋದಿ ಮಾಧ್ಯಮಗಳು ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ತಾತ್ಕಾಲಿಕವಾಗಿ ಮುನ್ನಡೆ ದೊರೆಯಬಹುದೇನೋ ಹೊರತು ಅದು ಶಾಶ್ವತವಲ್ಲ. ಮುಂದಿನ ದಿನಗಳಲ್ಲಿ ಜನರು ಬೇಸತ್ತು ಈ ಫಾಸಿಸ್ಟ್ ಸರ್ಕಾರ ಮತ್ತು ಮುಸ್ಲಿಂ ದ್ವೇಷಿ ಗೋದಿ ಮಾಧ್ಯಮಕ್ಕೆ ಇತಿಹಾಸದಲ್ಲಿ ಉಳಿಯುವಂತ ಪಾಠವನ್ನೇ ಕಲಿಸುತ್ತಾರೆ. ಆ ದಿನಗಳು ದೂರ ಇಲ್ಲ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ  ಅಬ್ದುಲ್ ಮಜೀದ್ ಹೇಳಿದರು.



Join Whatsapp