Home ಟಾಪ್ ಸುದ್ದಿಗಳು ಕೋವಿಡ್ ಸಾವಿನ ಸಂಖ್ಯೆ ಬಚ್ಚಿಟ್ಟು ಮೋದಿ ಸರ್ಕಾರ ಜನರನ್ನು ವಂಚಿಸುತ್ತಿದೆ: ಸಿದ್ದರಾಮಯ್ಯ ಕಿಡಿ

ಕೋವಿಡ್ ಸಾವಿನ ಸಂಖ್ಯೆ ಬಚ್ಚಿಟ್ಟು ಮೋದಿ ಸರ್ಕಾರ ಜನರನ್ನು ವಂಚಿಸುತ್ತಿದೆ: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಕೋವಿಡ್ ನಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆಯನ್ನು ಬಚ್ಚಿಟ್ಟು ಮೋದಿ ಸರ್ಕಾರ ಜನರನ್ನು ವಂಚಿಸುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೋವಿಡ್ ಕಾಯಿಲೆಯಿಂದ ಸತ್ತವರ ಸಂಖ್ಯೆಯನ್ನು ಬಚ್ಚಿಟ್ಟಿರುವ ಕೇಂದ್ರ ಬಿಜೆಪಿ ಸರ್ಕಾರದ ಸುಳ್ಳುಗಳ ಸರಮಾಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲುಗೊಳಿಸಿದೆ. ಕೋವಿಡ್ ಸಾವಿನ ಸಂಖ್ಯೆ ಕೇಂದ್ರ ಸರ್ಕಾರದ ಪ್ರಕಾರ 4.81 ಲಕ್ಷ ಮತ್ತು ಡಬ್ಲ್ಯುಎಚ್ಒ ಪ್ರಕಾರ 47.40 ಲಕ್ಷ ಅವರು ಎಂದು ತಿಳಿಸಿದ್ದಾರೆ.

ಕೋವಿಡ್ ಕಾಯಿಲೆಯಿಂದ ಸತ್ತವರಿಗೆ ಪರಿಹಾರ ಕೊಡುವುದನ್ನು ತಪ್ಪಿಸಲು ಬಿಜೆಪಿ ಸರ್ಕಾರ ಸಾವಿನ ಸುಳ್ಳು ಲೆಕ್ಕ ಹೇಳಿ ಮೋಸ ಮಾಡಿದೆ. ಇದರಿಂದ ಕೋವಿಡ್ ನಿಂದ ಸಾವಿಗೀಡಾದ ಲಕ್ಷಾಂತರ ಮಂದಿಯ ಕುಟುಂಬಕ್ಕೆ ಪರಿಹಾರವೇ ಸಿಕ್ಕಿಲ್ಲ. ಕೋವಿಡ್ ಸಾವಿನ ಮರು ಎಣಿಕೆ ಮಾಡಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಸಾವಿನ ಸಂಖ್ಯೆ ಕೇವಲ 37,603 ಎಂದು ರಾಜ್ಯ ಬಿಜೆಪಿ ಸರ್ಕಾರ ಹೇಳಿತ್ತು. ಕೆಪಿಸಿಸಿ ಸಮೀಕ್ಷೆ ಪ್ರಕಾರ ಸಾವಿನ ಸಂಖ್ಯೆ 3.17 ಲಕ್ಷ ಆಗಿತ್ತು. ಅರವಿಂದ್ ಸುಬ್ರಹ್ಮಣ್ಯ ಮತ್ತು ಜೇಕಬ್ ಝಾ ಪ್ರಕಾರ ಸಾವಿನ ಸಂಖ್ಯೆ ನಾಲ್ಕು ಲಕ್ಷ. ಕಳೆದ ವರ್ಷದ ಜೂನ್ ತಿಂಗಳಲ್ಲಿಯೇ ನಾನು ಇದನ್ನು ಹೇಳಿದ್ದೆ ಎಂದು ಅವರು ತಿಳಿಸಿದ್ದಾರೆ.

ಕೊರಾನ್ ಕಾಯಿಲೆಯಿಂದ ರಾಜ್ಯದಲ್ಲಿ ಈ ವರೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದೆ. ಮರು ಸಮೀಕ್ಷೆ ಮೂಲಕ ಮೃತರ ಸಂಖ್ಯೆಯನ್ನು ಖಚಿತವಾಗಿ ತಿಳಿದುಕೊಂಡು ಮೃತರ ಕುಟುಂಬಕ್ಕೆ ಕನಿಷ್ಠ 4 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಆಗ್ರಹಿಸುವುದಾಗಿ ತಿಳಿಸಿದ್ದಾರೆ.

ಜನತೆಗೆ ಉತ್ತರದಾಯಿಯಾಗಿ ಪಾರದರ್ಶಿಕವಾಗಿ ಕಾರ್ಯನಿರ್ವಹಿಸಬೇಕಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅಧಿಕೃತವಾದ ಮಾಹಿತಿಗಳನ್ನು ಮುಚ್ಚಿಟ್ಟು ದ್ರೋಹ ಎಸಗುತ್ತಿದೆ. ಸತ್ಯ ಸಂಗತಿ ಬಯಲಾದರೆ ತಮ್ಮ ಬಣ್ಣ ಬಯಲಾಗುತ್ತಿದೆ ಎಂಬ ಭಯದಿಂದ ಸುಳ್ಳುಗಳ ಮಾಲೆ ಹೆಣೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಕಾಯಿಲೆಯನ್ನು ಔಷಧಿ ಮತ್ತು ಚಿಕಿತ್ಸೆಯ ಮೂಲಕ ಎದುರಿಸಬೇಕಾಗಿದ್ದ ಸರ್ಕಾರ ಸುಳ್ಳು ಮತ್ತು ಮೋಸಗಳಿಂದ ಎದುರಿಸಲು ಹೊರಟಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 39 ಜನ ಸತ್ತಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಸತ್ತವರು ಮೂರು ಜನ ಎಂದು ಹೇಳಿತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2020 ರಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಒಟ್ಟು 36.5 ಲಕ್ಷ ಜನ ಸತ್ತಿರುವುದನ್ನು ಕೇಂದ್ರ ರಿಜಿಸ್ಟಾರ್ ಜನರಲ್ ಕಚೇರಿಯ ವರದಿ ಬಹಿರಂಗ ಪಡಿಸಿದೆ. ಆ ವರ್ಷ ಸಾವಿಗೀಡಾದ 81 ಲಕ್ಷ ಜನರಲ್ಲಿ ಶೇಕಡಾ 45 ರಷ್ಟು ಜನ ಚಿಕಿತ್ಸೆ ಸಿಗದೆ ಮೃತ ಪಟ್ಟಿರುವುದು ಕಳವಳಕಾರಿ ಬೆಳವಣಿಗೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version