Home ಟಾಪ್ ಸುದ್ದಿಗಳು ಮೋದಿ ಆಗಮನ: ಮಾರ್ಗದುದ್ದಕ್ಕೂ ತರಕಾರಿ ಮಾರಾಟ ಮಾಡುವ ಮೂಲಕ ರೈತರ ಪ್ರತಿಭಟನೆ

ಮೋದಿ ಆಗಮನ: ಮಾರ್ಗದುದ್ದಕ್ಕೂ ತರಕಾರಿ ಮಾರಾಟ ಮಾಡುವ ಮೂಲಕ ರೈತರ ಪ್ರತಿಭಟನೆ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಮೈಸೂರಿಗೆ ಮಾರ್ಗದುದ್ದಕ್ಕೂ ತರಕಾರಿ ಮಾರಾಟ ಮಾಡುವ ಮೂಲಕ ರೈತ ಮುಖಂಡರು ವಿನೂತನವಾಗಿ ಪ್ರತಿಭಟಿಸಿದರು.

ಇಲ್ಲಿನ ನ್ಯಾಯಾಲಯದ ಮುಂಭಾಗ ಇರುವ ಗಾಂಧಿ ಪುತ್ಥಳಿ ಮುಂದೆ ಜಮಾಯಿಸಿದ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರು ತರಕಾರಿ, ದವಸ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರಾಟ ಮಾಡುವುದರ ಮೂಲಕ ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಪ್ರಧಾನಿಯಾಗುವ ಮುನ್ನ ನಾನು ಅಧಿಕಾರಕ್ಕೆ ಬಂದರೆ ಡಾ. ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇನೆ ಎಂದು ಭರವಸೆ ನೀಡಿದ್ದಲ್ಲದೇ, ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಇವೆಲ್ಲ ಯೋಜನೆಗಳು ಜಾರಿಯಾಯಿತೇ? ಎಂದು ಪ್ರತಿಭಟನಕಾರರು ಪ್ರಶ್ನಿಸಿದ್ದಾರೆ.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಪ್ರಧಾನಿ ಮೋದಿ ಬಂದು ಹೋಗುವ ಕಾರ್ಯಕ್ರಮಕ್ಕೆ 12 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ ಎನ್ನಲಾಗುತ್ತದೆ. ಇಷ್ಟೊಂದು ಖರ್ಚು ಮಾಡಿ ಮೈಸೂರಿಗೆ ಬರುವ ಮೋದಿ, ದೇಶದಲ್ಲಿ ರೈತರ ಉಳಿವಿಗಾಗಿ ಬೇಕಾದ ಕಾನೂನು ಮಾಡದಿರುವುದು ಹಾಸ್ಯಾಸ್ಪದ. ಉದ್ಯಮಿಗಳಿಗೆ ನೂರಾರು ಕೋಟಿ ಬ್ಯಾಂಕ್ ಗಳಿಂದ ಸಾಲ ನೀಡಲಾಗುತ್ತದೆ. ಆದರೆ, ರೈತರು ಸಾಲ ಕೇಳಿದರೆ ಹಣ ನೀಡಲು ಸತಾಯಿಸುತ್ತಾರೆ. ರೈತರನ್ನು ಬ್ಯಾಂಕ್ ಗಳು ಕೆಟ್ಟ ರೀತಿಯಲ್ಲಿ ನೋಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಆತ್ಮಹತ್ಯೆ ಜಾಸ್ತಿ ಆಗುತ್ತಿದೆ. ಇದರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾತನಾಡುತ್ತಿಲ್ಲ. ಫಲಾನುಭವಿಗಳ ಜೊತೆ ಚರ್ಚಿಸುವ ಬಿಜೆಪಿ ಪಕ್ಷದವರು, ನಮ್ಮನ್ನು ಕರೆದಿಲ್ಲ. ನಮ್ಮನ್ನೂ ಕರೆಯಲಿ, ನಾವು ಚರ್ಚೆ ಮಾಡುತ್ತೇವೆ. ಕನಿಷ್ಠ ಬೆಂಬಲ ಬೆಲೆ ಖಾತರಿ ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

Join Whatsapp
Exit mobile version