Home ಟಾಪ್ ಸುದ್ದಿಗಳು ಮೋದಿ ಮತ್ತು ಉದ್ಧವ್ ಠಾಕ್ರೆ ಇನ್ನೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ: ಸಂಜಯ್ ರಾವುತ್

ಮೋದಿ ಮತ್ತು ಉದ್ಧವ್ ಠಾಕ್ರೆ ಇನ್ನೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ: ಸಂಜಯ್ ರಾವುತ್

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಉತ್ತಮ ಸಂಬಂಧ ಹೊಂದಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳು ಬೇರೆ ವಿಷಯವಾಗಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ಮೋದಿ ಮತ್ತು ಉದ್ಧವ್ ನಡುವಿನ ಭೇಟಿ ಹೆಚ್ಚು ಚರ್ಚೆಗೆ ಕಾರಣವಾಗಿರುವ ನಡುವೆ ಶಿವಸೇನೆಯ ನಾಯಕ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಮೋದಿ ಮತ್ತು ಉದವ್ ಜೂನ್ 8 ರಂದು ಭೇಟಿಯಾಗಿದ್ದರು. ಈ ಸಭೆ ಹಳೆಯ ಮಿತ್ರಪಕ್ಷಗಳು ಒಂದಾಗುವ ಸಂಕೇತವೇ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ, ಸುಪ್ರೀಂ ಕೋರ್ಟ್ ಮರಾಠಾ ಮೀಸಲಾತಿ ರದ್ದತಿಗೆ ಸಂಬಂಧಿಸಿದ ವಿಷಯದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಖಚಿತಪಡಿಸಿಕೊಳ್ಳಲು ಮೋದಿ ಅವರನ್ನು ಭೇಟಿ ಮಾಡಿದ್ದೇನೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

“ಮೋದಿ ಮತ್ತು ಉದ್ದವ್ ಸುಮಾರು 40 ನಿಮಿಷಗಳ ಕಾಲ ಮಾತನಾಡಿದ್ದಾರೆ. ಬಿಜೆಪಿ ಮತ್ತು ಶಿವಸೇನೆ ಒಂದಾಗುತ್ತಿದೆ ಎಂದು ಈ ಭೇಟಿಯನ್ನು ಅರ್ಥೈಸುವ ಅಗತ್ಯವಿಲ್ಲ. ನಮ್ಮ ದಾರಿ ವಿಭಿನ್ನವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಪ್ರತಿಪಕ್ಷವಾಗಿದೆ ಮತ್ತು ನಾವು ಅಧಿಕಾರದಲ್ಲಿದ್ದೇವೆ. ಆದರೆ ವೈಯಕ್ತಿಕವಾಗಿ ನಾಯಕರ ನಡುವೆ ಉತ್ತಮ ಸಂಬಂಧವಿದೆ. ಮೋದಿಯವರು ಠಾಕ್ರೆ ಕುಟುಂಬದೊಂದಿಗೆ ವರ್ಷಗಳಿಂದ ಉತ್ತಮ ಸಂಬಂಧ ಹೊಂದಿದ್ದಾರೆ. ರಾಜಕೀಯ ಬೇರೆ ಆದರೆ ಸಂಬಂಧವು ಪ್ರಬಲವಾಗಿದೆ”ಎಂದು ಸಂಜಯ್ ರಾವುತ್ ಹೇಳಿದರು.

ಮಹಾರಾಷ್ಟ್ರದಲ್ಲಿ ಮಿತ್ರಪಕ್ಷಗಳಾಗಿದ್ದ ಶಿವಸೇನೆ ಮತ್ತು ಬಿಜೆಪಿ 2019 ರ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಹುದ್ದೆ ಹಂಚಿಕೆ ವಿಚಾರದಲ್ಲಿ ವಿಭಜನೆಯಾಗಿತ್ತು. ನಂತರ ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಅಧಿಕಾರಕ್ಕೆ ಬಂದಿತ್ತು. ಆದರೆ, ಮೋದಿ-ಉದ್ಧವ್ ಮಾತುಕತೆಯ ಬಳಿಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಮತ್ತು ಬಿಜೆಪಿ ಒಂದಾಗಬಹುದು ಎಂಬ ವದಂತಿಗಳು ಹಬ್ಬುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂಬ ಪಕ್ಷದ ರಾಜ್ಯಾಧ್ಯಕ್ಷ ನಾನಾ ಪಟೋಲಿ ಹೇಳಿಕೆಯು ಈ ವದಂತಿಗಳಿಗೆ ಬಲ ತುಂಬಿದೆ.

Join Whatsapp
Exit mobile version