ಪ್ರತಿಭೆಯ ವಿಕಾಸಕ್ಕೆ ಆಧುನಿಕ ಮಾಧ್ಯಮಗಳು ಪೂರಕವಾಗಬೇಕು: ಹಂಪ ನಾಗರಾಜಯ್ಯ

Prasthutha|

ಬೆಂಗಳೂರು: ಜಾಗತೀಕರಣದ ಈ ಸಂದರ್ಭದಲ್ಲಿ ನಮಗೆ ಲಭ್ಯವಿರುವ ಇಂದಿನ ಆಧುನಿಕ ಮಾಧ್ಯಮಗಳನ್ನು ಯುವ ಲೇಖಕರು ತಮ್ಮ ಪ್ರತಿಭೆಯ ವಿಕಾಸಕ್ಕೆ ಬಳಸಿಕೊಳ್ಳಬೇಕು ಎಂದು ಕನ್ನಡದ ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಹೇಳಿದ್ದಾರೆ.
ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಆಯೋಜಿಸಿದ್ದ 55 ಯುವ ಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಮತ್ತು ಶಾಲಾ-ಕಾಲೇಜುಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

- Advertisement -

ಹಿಂದೆ ಇಂತಹ ಅನುಕೂಲಗಳು ಇರಲಿಲ್ಲ ಈ ರೀತಿಯ ಅದ್ಧೂರಿಯ ಪುಸ್ತಕ ಬಿಡುಗಡೆ ಸಮಾರಂಭ ಗಳು ನಡೆಯುತ್ತಿರಲಿಲ್ಲ. ಆದರೆ ಇಂದು ಸರ್ಕಾರ ಪುಸ್ತಕ ಪ್ರಾಧಿಕಾರದ ಮೂಲಕ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಲು ಮುಂದಾಗಿರುವುದು ಅತ್ಯಂತ ಪ್ರಶಂಸನೀಯ, ರಾಜಾಶ್ರಯ ಗಳು ತಮ್ಮ ಆಸ್ಥಾನ ಕವಿಗಳನ್ನು ತಮ್ಮ ಸಿಂಹಾಸನದ ಆಸನಕ್ಕೆ ತಕ್ಕುದಾದ ಆಸನವನ್ನು ನೀಡುವ ಮೂಲಕ ಗೌರವಿಸುತ್ತಿದ್ದರು, ಹಾಗೆಯೇ ,ಇಂದು ಸರ್ಕಾರ ಹಾಗೂ ಪುಸ್ತಕ ಪ್ರಾಧಿಕಾರ ದಂತಹ ಸಂಸ್ಥೆಗಳು ಲೇಖಕರನ್ನು ಗುರುತಿಸಿ ,ಗೌರವಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಯಾವುದೇ ಒಂದು ಕೃತಿಯ ಬಿಡುಗಡೆ ಚೊಚ್ಚಲ ಹೆರಿಗೆಗೆ ಸಮಾನ, ಏಕೆಂದರೆ ಆ ಕೃತಿಯ ಬರಹಗಾರ ತನ್ನ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಅಂತಹುದೇ ಉದ್ವೇಗ, ತವಕ ಅನುಭವಿಸುತ್ತಾನೆ ಎಂದ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡದ ಹೆಸರಾಂತ ಸಾಹಿತಿ ಸಾ .ಶಿ ಮರುಳಯ್ಯ ಅವರ ಮೊದಲ ಕೃತಿ ‘ಸಂಗನಕಲ್ಲು’ ಬಿಡುಗಡೆಯಾದ ಸಂದರ್ಭವನ್ನು ಸ್ಮರಿಸಿದರು.
ಹಾಗೆಯೇ ,ಉಚಿತವಾಗಿ ಶಾಲಾ-ಕಾಲೇಜುಗಳಿಗೆ ಪುಸ್ತಕ ಹಂಚುವ ಯೋಜನೆ ಅತ್ಯಂತ ಪ್ರಶಂಸನೀಯ. ಇದು ಮಕ್ಕಳಲ್ಲಿ ಓದುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ , ಪುಸ್ತಕ ದಾನದ ಮೂಲಕ ಜ್ಞಾನದಾನ ಮಾಡುವುದು ನಿಜಕ್ಕೂ ಬಹುದೊಡ್ಡ ಸಂಗತಿ. ಅದರ ಮೂಲಕ ನಾವು ಪುಸ್ತಕ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

- Advertisement -

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಖ್ಯಾತ ಬರಹಗಾರ ಜಯಂತ ಕಾಯ್ಕಿಣಿ ಬರಹಗಾರ ಬದುಕಿನ ಕಟ್ಟಳೆಗಳಿಂದ ಹೊರಗೆ ಬಂದು ಬರೆಯಬೇಕು ಎಂದು ಹೇಳಿದರು.

ಬದುಕಿನ ಕಟ್ಟಳೆಗಳನ್ನು ಮುರಿದು ಬರೆದರೆ ಮಾತ್ರ ಅದು ಅನುಭವದ್ರವ್ಯ ವಾಗುತ್ತದೆ , ಕಟ್ಟಲೆಗಳು ಸೃಜನಶೀಲತೆಯನ್ನು ಕಟ್ಟಿಹಾಕುತ್ತದೆ ಎಂದರು.

ಯುವ ಬರಹಗಾರರ ಚೊಚ್ಚಲ ಕೃತಿಯ ಬಿಡುಗಡೆ ಆಯಾ ಬರಹಗಾರರಿಗೆ ಎಂದೂ ಅವಿಸ್ಮರಣೀಯ, ಏಕೆಂದರೆ ,ಬದುಕಿನಲ್ಲಿ ಮೊದಲ ಮುತ್ತು, ಮೊದಲ ಅನುಭವ, ಮೊದಲ ಪುಸ್ತಕ ಕೊಡುವ ಸುಖ ಬೇರೆ ಯಾವುದೂ ನೀಡಲು ಸಾಧ್ಯವಿಲ್ಲ .ಹಾಗಾಗಿ ಪ್ರತಿ ಲೇಖಕನಿಗೆ ಅವರ ಮೊದಲ ಪುಸ್ತಕದ ಬಿಡುಗಡೆ ಬದುಕಿನ ಅವಿಸ್ಮರಣೀಯ ಸಂದರ್ಭವಾಗಿರುತ್ತದೆ ಎಂದು ಅವರು ತಿಳಿಸಿದರು.
ಬರೆಯುವುದಕ್ಕಾಗಿ ಬದುಕಬೇಡಿ, ಬದುಕಿದ್ದನ್ನು ಬರೆಯಿರಿ ಎಂದ ಅವರು ಸಹಬಾಳ್ವೆ ಮತ್ತು ಸಮಾನ ಮನಸ್ಸು ಇದ್ದಾಗ ಮಾತ್ರ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಯಾವುದೇ ಕವಿಗೆ ಆತ್ಮವಿಮರ್ಶೆ ಇದ್ದಾಗ ಮಾತ್ರ ಆತ ಬೆಳೆಯಲು ಸಾಧ್ಯ, ಅನಾಮಿಕತೆಯ ಕಡೆಗಿನ ಪಯಣ ಹಾಗೂ ಜೀವನದೆಡೆಗಿನ ಪ್ರೀತಿ ಕಾವ್ಯಕ್ಕೆ ಮೂಲ, ಚಡಪಡಿಕೆ ಯೇ ಸೃಜನಶೀಲ ಸಾಹಿತ್ಯದ ಮೂಲದ್ರವ್ಯ ಎಂದ ಅವರು ,
ತಾವು ಬರೆದದ್ದನ್ನು ತಾವೇ ವಿಮರ್ಶಿಸಿ ಕೊಂಡು ಕಾವ್ಯ ಗುಣದೋಷಗಳನ್ನು ಗುರುತಿಸಿದಾಗ ಮಾತ್ರ ಲೇಖಕ ಬೆಳೆಯಲು ಸಾಧ್ಯ, ದ ರಾ ಬೇಂದ್ರೆ ಅವರು ಆ ರೀತಿ ತಮ್ಮ ಕಾವ್ಯವನ್ನು ತಾವೇ ಸ್ವತಃ ವಿಮರ್ಶಿಸಿ ಕೊಂಡು ತಮ್ಮ ಕಾವ್ಯದ ಗುಣ ದೋಷಗಳನ್ನು ಕುರಿತು ಬರೆದುಕೊಂಡಿದ್ದಾರೆ ಎಂದು ತಿಳಿಸಿದರು.

ಎಲ್ಲದಕ್ಕೂ ಬೇಕಾದ್ದು ಓದು, ಬರಹಗಾರರು ಎಷ್ಟು ಓದುತ್ತಾರೋ ಅಷ್ಟು ಅವರ ಬರವಣಿಗೆ ಬೆಳೆಯುತ್ತದೆ ಎಂದು ಯುವ ಬರಹಗಾರರಿಗೆ ಕಾಯ್ಕಿಣಿ ಕಿವಿಮಾತು ಹೇಳಿದರು.

ಕಾವ್ಯದಲ್ಲಿ ಮೌನವು ಇರಬೇಕು ಎಂದು ಪ್ರತಿಪಾದಿಸಿದ ಜಯಂತಕಾಯ್ಕಿಣಿ ಮೌನ ಎಂಬುದು ಕಾವ್ಯದಲ್ಲಿನ ಅವ್ಯಕ್ತ ಭಾವ ಅದು ಹೇಳಲಾಗದ್ದನ್ನು ಹೇಳಲು ಕಾವ್ಯದಲ್ಲಿ ಬಳಸಬೇಕು, ಆದರೆ ಇತ್ತೀಚಿನ ಕವಿ ಗಳು ಅದನ್ನು ವಾಕ್ಯವಾಗಿ ಸಿದ್ದಾರೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್. ನಂದೀಶ್ ಹಂಚೆ ಅವರು ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಈ ಕೆಲಸವನ್ನು ಅತ್ಯಂತ ಪಾರದರ್ಶಕವಾಗಿ ಮಾಡಬೇಕು ಎಂದು ಆಯ್ಕೆ ಸಮಿತಿಯನ್ನು ರಚಿಸಿ ,ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಬರಹಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

2020 ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗೆ ಬಂದ ಅರ್ಜಿಗಳು 221, ಅವುಗಳಲ್ಲಿ 135 ಕವನಸಂಕಲನಗಳು.ಇದು ಇಂದಿನ ಯುವಜನರು ಹೆಚ್ಚಾಗಿ ಕಾವ್ಯದ ಕಡೆ ಆಕರ್ಷಿತರಾಗುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ, ಬೇರೆ ಬೇರೆ ಸಾಹಿತ್ಯ ಪ್ರಕಾರಗಳ ಕಡೆ ಕೂಡ ಇಂದಿನ ಯುವಜನತೆ ಆಸಕ್ತಿ ವಹಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಸ್ವೀಕರಿಸಿದ
221 ಹಸ್ತಪ್ರತಿಗಳಲ್ಲಿ ಪ್ರಾಧಿಕಾರದ ಆಯ್ಕೆಸಮಿತಿ 55 ಹಸ್ತಪ್ರತಿಗಳನ್ನು ಆರಿಸಿತು .ಅವುಗಳಿಗೆ ತಲಾ ರೂ.15000 ಧನಸಹಾಯವನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಬೆಂಗಳೂರು ಕಂದಾಯ ವಿಭಾಗ ವ್ಯಾಪ್ತಿಯ ಸುಮಾರು 250 ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.

ಯುವ ಬರಹಗಾರರಿಗೆ ಕಾರ್ಯಕ್ರಮದ ಸ್ಮರಣಾರ್ಥ ಸ್ಮರಣ ಫಲಕ ನೀಡಲಾಯಿತು.ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ ಕಿರಣ್ ಸಿಂಗ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಸೌಭಾಗ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Join Whatsapp