Home ಜಾಲತಾಣದಿಂದ ಔರಂಗಾಬಾದ್’ನಲ್ಲಿ ಗುಂಪು ಘರ್ಷಣೆ: ಪೊಲೀಸ್ ವಾಹನಗಳಿಗೆ ಬೆಂಕಿ

ಔರಂಗಾಬಾದ್’ನಲ್ಲಿ ಗುಂಪು ಘರ್ಷಣೆ: ಪೊಲೀಸ್ ವಾಹನಗಳಿಗೆ ಬೆಂಕಿ

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್’ನಲ್ಲಿ ನಿನ್ನೆ ಸಂಜೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯ ವೇಳೆ ಒಂದು ಗುಂಪು ಪೊಲೀಸ್ ತಂಡದ ಮೇಲೆ ದಾಳಿ ನಡೆಸಿದ್ದಲ್ಲದೆ ಹಲವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

 ಈಗ ಚತ್ರಪತಿ ಸಂಭಾಜಿ ನಗರ ಆಗಿರುವ ಔರಂಗಾಬಾದಿನಲ್ಲಿ ಎರಡು ಗುಂಪುಗಳ ನಡುವಣ ವಾಗ್ವಾದವು ಗಲಭೆಗೆ ತಿರುಗಿದೆ ಎಂದು ತಿಳಿದುಬಂದಿದೆ.

ಒಂದು ಕಡೆ ರಾಮ ನವಮಿ, ಮತ್ತಿನ್ನೊಂದು ಕಡೆ ರಮಝಾನ್ ಉಪವಾಸವಿರುವುದರಿಂದ ಕೋಮು ಗಲಭೆಗೆ ತಿರುಗಬಾರದು ಎನ್ನುವುದಕ್ಕಾಗಿ ಭಾರೀ ಪೊಲೀಸ್ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸದ್ಯ ಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

500ರಿಂದ 600 ಜನರು ಪೊಲೀಸರ ಮೇಲೆ ದಾಳಿ ಮಾಡಿದ್ದು, ಅವರನ್ನು ಇನ್ನು ಮೇಲಷ್ಟೆ ಗುರುತಿಸಬೇಕಾಗಿದೆ ಎಂದು ಪೊಲೀಸರು ಹೇಳಿದರು. ಘರ್ಷಣೆಯು ಪ್ರಸಿದ್ಧ ರಾಮ ಮಂದಿರವಿರುವ ಕಿರಾಡ್ ಪುರ ಪ್ರದೇಶದಲ್ಲಿ ನಡೆದಿರುವುದಾಗಿ ಪೊಲೀಸ್ ಕಮಿಷನರ್ ನಿಖಿಲ್ ಗುಪ್ತ ತಿಳಿಸಿದ್ದಾರೆ.

“ಕೆಲವು ಯುವಕರು ಕೈ ಕೈ ಮಿಲಾಯಿಸಿದಾಗ ಈ ಗಲಭೆ ಆರಂಭವಾಗಿದೆ. ಅವರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಗುಂಪು ಗಲಭೆ ದಾಳಿ ನಡೆದಿದೆ. ಆರೇಳು ವಾಹನಗಳು ಹಾನಿಗೊಳಗಾಗಿವೆ” ಎಂದೂ ಗುಪ್ತ ತಿಳಿಸಿದರು.

ಸುಟ್ಟ ವಾಹನ ಇತ್ಯಾದಿಗಳನ್ನು ತೆಗೆಯಲಾಗಿದೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದೂ ಅವರು ಹೇಳಿದರು. ಹಿಂಸೆ ನಡೆಸಿದವರನ್ನು ಬಂಧಿಸಲು ಹತ್ತು ತಂಡಗಳನ್ನು ರಚಿಸಲಾಗಿದೆ ಎಂದವರು ತಿಳಿಸಿದರು.

ಸ್ಥಳೀಯ ಸಂಸದ ಇಮ್ತಿಯಾಝ್ ಜಲೀಲ್ ಮತ್ತು ಬಿಜೆಪಿ ಸಚಿವ ಅತುಲ್ ಸಾವೆಯವರು ಶಾಂತಿಗಾಗಿ ಪ್ರಯತ್ನಿಸುತ್ತಿರುವ ವೀಡಿಯೋಗಳು ಜಾಲ ತಾಣಗಳಲ್ಲಿ ಕಂಡು ಬಂದಿವೆ.

“ಕೆಲವು ವಾಟ್ಸಪ್ ಸಂದೇಶಗಳ ಬಗ್ಗೆ ಎರಡು ಯುವಕರ ಗುಂಪುಗಳು ವಿವಾದ ನಡೆಸಿ ಗಲಭೆಗೆ ಕೈ ಹಾಕಿವೆ. ಇದರ ಬಳಿಕ ನೂರಾರು ಜನರು ರಸ್ತೆಯಲ್ಲಿ ತುಂಬಿಕೊಂಡು ಹೇಗೆಂದರೆ ಹಾಗೆ ಕಲ್ಲೆಸೆದಿದ್ದಾರೆ” ಎಂದು ಸಂಸದ ಜಲೀಲ್ ಹೇಳಿದರು. ಇವರು ಅಸದುದ್ದೀನ್ ಉವೈಸಿಯವರ ಎಐಎಂಐಎಂ ಪಕ್ಷಕ್ಕೆ ಸೇರಿದವರು.

Join Whatsapp
Exit mobile version