ಹೊಸನಗರ: ಸತತ ಮಳೆಯಿಂದಾಗಿ ಹೊಂಡ ಗುಂಡಿಗಳು ತುಂಬಿಕೊಂಡು ಸಂಪೂರ್ಣ ಹಾಳಾಗಿರುವ ತಮ್ಮಡಿಕೊಪ್ಪ-ಮಳವಳ್ಳಿ-ರಿಪ್ಪನ್‌ಪೇಟೆ ಸಂಪರ್ಕ ರಸ್ತೆಯನ್ನು ರಿಪೇರಿ ಮಾಡುವತ್ತ ಶಾಸಕ ಹರತಾಳು ಹಾಲಪ್ಪ ಗಮನ ಹರಿಸಿಲ್ಲವೆಂದು ಆರೋಪಿಸಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಗೋಪಾಲಕೃಷ್ಣ, ನಿತ್ಯ ವಹಿವಾಟಿಗಾಗಿ ರಿಪ್ಪನ್‌ಪೇಟೆಯನ್ನೇ ಆಶ್ರಯಿಸಿರುವ ತಮ್ಮಡಿಕೊಪ್ಪದ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆ ಹದಗೆಟ್ಟಿರುವ ಕಾರಣ 12 ಕಿಮೀ ಸುತ್ತಿಬಳಸಿ ರಿಪ್ಪನ್‌ಪೇಟೆ ಸೇರಬೇಕಾಗಿದೆ. ಶೇ.40, 60 ಕಮಿಷನ್ ಪಡೆಯುತ್ತಿರುವ ಸರ್ಕಾರವಾಗಲಿ, ಶಾಸಕರಾಗಲಿ ಸ್ಥಳೀಯರ ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ. ಪಕ್ಷ ರಾಜಕಾರಣ ಮಾಡುತ್ತಿರುವ ಶಾಸಕರು ಸರ್ಕಾರದ ಎಲ್ಲ ಸವಲತ್ತುಗಳನ್ನು ತಮ್ಮ ಕಾರ್ಯಕರ್ತರಿಗೆ ನೀಡುತ್ತಿದ್ದು, ಜನರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.
ಮಳೆಯಿಂದ ಮನೆ ಕಳೆದುಕೊಂಡವರಿಗೆ ಕೇವಲ 10 ಸಾವಿರ ರೂ. ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಕೂಡಲೇ ಗ್ರಾಮಕ್ಕೆ ರಸ್ತೆ ಹಾಗೂ ಸೇತುವೆ ನಿರ್ಮಾಣ ಮಾಡಬೇಕು. ಇಲ್ಲವಾದರೆ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.