ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಒಕ್ಕಲಿಗ ಸಮುದಾಯಕ್ಕೆ 6 ಕೋಟಿ ಮೌಲ್ಯದ ಜಮೀನು ಬರೆದು ಕೊಟ್ಟಿದ್ದಾರೆ.
ಹೊಸಕೋಟೆಯಲ್ಲಿ ನಿರ್ಣಾಯಕವಾಗಿರುವ ಅತಿ ಹೆಚ್ಚು ಮತಗಳನ್ನು ಹೊಂದಿರುವ ಒಕ್ಕಲಿಗ ಸಮುದಾಯದ ಮತ ಸೆಳೆಯಲು ಯೋಜನೆ ಹಾಕಿರುವ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು 6 ಕೋಟಿ ಮೌಲ್ಯದ ಜಮೀನು ಗಿಫ್ಟ್ ಮಾಡಿದ್ದಾರೆ. ಹೊಸಕೋಟೆ ತಾಲೂಕು ಒಕ್ಕಲಿಗರ ಸಂಘಕ್ಕೆ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನು ದಾನ ಮಾಡಿದ್ದಾರೆ.
ಒಕ್ಕಲಿಗ ಸಮುದಾಯವು ಕ್ಷೇತ್ರದಲ್ಲಿ 45 ಸಾವಿರ ಮತಗಳನ್ನ ಹೊಂದಿದ್ದು, ಹೀಗಾಗಿ ಮತಗಳನ್ನ ಗಟ್ಟಿ ಮಾಡಿಕೊಳ್ಳಲು ಜಮೀನು ಗಿಫ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಕೆಂಪೇಗೌಡ ಜಯಂತಿಯಲ್ಲಿ ಜಮೀನು ಕೊಡಿಸುವುದಾಗಿ ಭರವಸೆ ನೀಡಿದ್ದ ಶರತ್, ಇದೀಗ ಹೇಳಿದ್ದ ಮಾತಿನಂತೆ ಚುನಾವಣೆ ಸಂದರ್ಭದಲ್ಲಿ ಜಮೀನು ಗಿಫ್ಟ್ ಮಾಡಿದ್ದಾರೆ.
ತಾನು ನೀಡಿದ ಜಮೀನಿನಲ್ಲಿ ಶಾಲಾ ಕಾಲೇಜು ಕಟ್ಟಿ ಎಲ್ಲಾ ಸಮುದಾಯದ ಬಡವರಿಗೆ ಅನುಕೂಲ ಮಾಡಿಕೊಡುವುದಾಗಿ ಶಾಸಕರು ಹೇಳಿದ್ದಾರೆ.