ಪಂಜಾಬ್ : ಇತ್ತಿಚ್ಚೆಗೆ ರಾಜಕಾರಣದಲ್ಲಿ ಪಕ್ಷಾಂತರವೆಂಬುದು ಸರ್ವೇ ಸಾಮಾನ್ಯವಾಗಿದೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಸೇರುವುದು, ಮತ್ತೆ ಮರಳಿ ಮಾತೃ ಪಕ್ಷಕ್ಕೆ ಬರುವುದೆಲ್ಲ ನಡೆಯುತ್ತಲೇ ಇರುತ್ತವೆ. ಹಾಗೇ, ಪಂಜಾಬ್ ನ ಶಾಸಕ ಬಲ್ವಿಂದರ್ ಸಿಂಗ್ ಲಡ್ಡಿ ಬಿಜೆಪಿಗೆ ಸೇರಿ ಕೇವಲ ಆರು ದಿನಗಳಲ್ಲಿ ಮತ್ತೆ ಮರಳಿ ಕಾಂಗ್ರೆಸ್ಗೆ ಬಂದಿದ್ದಾರೆ.
ಲಡ್ಡಿಯವರು ಶ್ರೀ ಹರಗೋಬಿಂದಪುರ ಕ್ಷೇತ್ರದ ಶಾಸಕರು. ಡಿಸೆಂಬರ್ 28ರಂದು, ಕ್ವಾದಿಯಾನ್ ಶಾಸಕ ಫತೇಹ್ಜಂಗ್ ಸಿಂಗ್ ಜತೆಗೂಡಿ ದೆಹಲಿಯಲ್ಲಿ ಬಿಜೆಪಿ ಸೇರಿದ್ದರು. ಪಂಜಾಬ್ ರಾಜ್ಯ ಬಿಜೆಪಿ ಉಸ್ತುವಾರಿ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಮ್ಮುಖದಲ್ಲಿ ಇವರಿಬ್ಬರೂ ಬಿಜೆಪಿ ಸೇರಿದ್ದರು. ಆದರೆ ಅವರು ಭಾನುವಾರ ರಾತ್ರಿ ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ ಮತ್ತು ಪಂಜಾಬ್ ಎಐಸಿಸಿ ಉಸ್ತುವಾರಿ ಹರೀಶ್ ಚೌಧರಿ ಸಮ್ಮುಖದಲ್ಲಿ ತಾವು ಮತ್ತೆ ಕಾಂಗ್ರೆಸ್ ಗೆ ಮರಳಿದ್ದಾಗಿ ಹೇಳಿದ್ದಾರೆ.
ಶಾಸಕ ಬಲ್ವಿಂದರ್ ಸಿಂಗ್ ಲಡ್ಡಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಲು ಕಾಂಗ್ರೆಸ್ ಹಿಂದೇಟು ಹಾಕಿದ್ದೇ ಅವರು ಕಾಂಗ್ರೆಸ್ ತೊರೆಯಲು ಕಾರಣ ಎಂದು ಮೂಲಗಳಿಂದ ತಿಳಿದುಬಂದಿತ್ತು. ಅಸಮಾಧಾನಗೊಂಡು ಬಿಜೆಪಿಗೆ ಸೇರಿದ್ದ ಅವರನ್ನು ವಾಪಸ್ ಪಕ್ಷಕ್ಕೆ ಕರೆತರಲು ಕಾಂಗ್ರೆಸ್ ನ ಮುಖಂಡರು ಪ್ರಯತ್ನ ಮಾಡುತ್ತಲೇ ಇದ್ದರು. ಅಲ್ಲದೆ, ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿಯೂ ಭರವಸೆ ಕೊಟ್ಟಿದ್ದಾರೆ. ಈಗ ಇದೇ ಕಾರಣಕ್ಕೆ ಬಲ್ವಿಂದರ್ ಸಿಂಗ್ ವಾಪಸ್ ಬಂದಿದ್ದಾರೆ ಎನ್ನಲಾಗಿದೆ. ಪಂಜಾಬ್ ನಲ್ಲಿ ಇದೇ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ.